ಮಣಿಪಾಲ ಕೆಎಂಸಿಯಲ್ಲಿ ವಿಶ್ವ ಗ್ಲುಕೋಮಾ ಸಪ್ತಾಹ ಆಚರಣೆ
ಮಣಿಪಾಲ, ಮಾ.9: ಮಣಿಪಾಲ ಕಸ್ತೂರ್‌ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೇತ್ರ ಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ವಿಶ್ವ ಗ್ಲುಕೋಮಾ ಸಪ್ತಾಹ-2020 ಆಚರಣೆ ಹಾಗೂ ಗ್ಲುಕೋಮಾ ತಪಾಸಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡಾ ಅವರು ಮಾತನಾಡಿ, ಶೇ.90ರಷ್ಟು ಗ್ಲುಕೋಮಾ ಸಮಸ್ಯೆಗಳು ಯಾರ ಗಮನಕ್ಕೆ ಬಾರದೇ ಇರುತ್ತವೆ. ಗ್ಲುಕೋಮ ತೊಂದರೆಯಿಂದ ಬಳಲುವವರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಕೇವಲ ತಪಾಸಣೆಯ ಸಂದರ್ಭದಲ್ಲಿ ಇವು ಪತ್ತೆಯಾಗುತ್ತವೆ. ಶಿಬಿರದಲ್ಲಿ ಈ ಬಗ್ಗೆ ಪರೀಕ್ಷಿಸಿ ಔಷಧೋಪಚಾರ, ಆಹಾರಗಳ ಕುರಿತು ಸಹೆ ನೀಡಲಾಗುತ್ತದೆ ಎಂದರು.
ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಮಾತನಾಡಿ, ಎಲ್ಲವೂ ಸರಿಯಾಗಿರುವಾಗ ನಾವು ನಮ್ಮ ಆರೋಗ್ಯವನ್ನು ಕಡೆಗಣಿಸುತ್ತೇವೆ. ವಯಸ್ಸಾಗುತಿದ್ದಂತೆ ದೇಹದ ಇತರ ಅಂಗಗಳೊಂದಿಗೆ ಕಣ್ಣಿನ ನಿಯಮಿತ ತಪಾಸಣೆಯೂ ಅಗತ್ಯ ಎಂದರು.
ಗ್ಲುಕೋಮಾ ಎಂಬುದು ಅಫ್ಟಿಕ್ ನರಗಳ ಹಾನಿಯನ್ನು ಒಳಗೊಂಡ ಕಾಯಿಲೆಯಾಗಿದೆ. ಗ್ಲುಕೋಮಾ ಕಾಯಿಲೆ, ನಿಧಾನವಾಗಿ ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಗ್ಲುಕೋಮಾದಲ್ಲಿ ಸಾಮಾನ್ಯವಾಗಿ ಕಣ್ಣಿನ ಒತ್ತಡ ಹೆಚ್ಚಿರುತ್ತದೆ. ಕಣ್ಣಿನ ನರದಲ್ಲಿ ರಕ್ತದ ಪೂರೈಕೆ ಅಸಮರ್ಪಕವಾಗಿರುತ್ತದೆ ಎಂದು ಗ್ಲುಕೋಮಾ ತಜ್ಞೆ ಡಾ.ನೀತಾ ಕೆ.ಐ.ಆರ್.ತಿಳಿಸಿದರು.
ಕೆಎಂಸಿಯ ಡೀನ್ ಡಾ.ಶರತ್‌ಕುಮಾರ್ ರಾವ್ ಪ್ರಮಾಣ ಪತ್ರಗಳನ್ನು ವಿತರಿಸಿದರು. ಕೆಎಂಸಿ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಉಪಸ್ಥಿತ ರಿದ್ದರು. ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರೆ, ನೇತ್ರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸುಲತಾ ಭಂಡಾರಿ ವಂದಿಸಿದರು.
ವಿಶ್ವ ಗ್ಲುಕೋಮಾ ಸಪ್ತಾಹದ ಅಂಗವಾಗಿ ಕೆಎಂಸಿ ನೇತ್ರ ವಿಜ್ಞಾನ ವಿಭಾಗ ಗ್ಲುಕೋಮಾ ತಪಾಸಣಾ ಕಾರ್ಯಕ್ರಮವನ್ನು ಸಾರ್ವಜನಿಕರಿಗಾಗಿ ಆಯೋಜಿಸಿದ್ದು, ಇದರಲ್ಲಿ 500ಕ್ಕೂ ಅಧಿಕ ಜನರು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದರು. ಮಣಿಪಾಲ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಗಳಿಂದ ಗ್ಲುಕೋಮಾ ಕುರಿತು ಜಾಗೃತಿ ಬೀದಿ ನಾಟಕ ಪ್ರದರ್ಶಿಸಲಾಯಿತು.