×
Ad

ಕಾರ್ಕಳ: ಮಾ.15ಕ್ಕೆ ಮೊಗೇರ ಸಮ್ಮೇಳನ

Update: 2020-03-09 22:38 IST

ಉಡುಪಿ, ಮಾ.9: ಜಿಲ್ಲೆಯಲ್ಲಿ ಕೇವಲ 3500 ಜನಸಂಖ್ಯೆ ಇರುವ ಪರಿಶಿಷ್ಟ ಜಾತಿಗೆ ಸೇರಿದ ಹಿಂದುಳಿದ ಮೊಗೇರ ಜನಾಂಗದ ಅಭಿವೃದ್ಧಿ ಹಾಗೂ ಆಶಯ ಗಳನ್ನು ಇರಿಸಿಕೊಂಡು ಉಡುಪಿ ಜಿಲ್ಲಾ ಮೊಗೇರ ಸಂಘದ ವತಿಯಿಂದ ‘ಮೊಗೇರ ಸಮ್ಮೇಳನ-2020’ ಇದೇ ಮಾ.15ರ ರವಿವಾರ ಕಾರ್ಕಳದ ಅತ್ತೂರು ಚರ್ಚ್ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಘದ ಕಾನೂನು ಸಲಹೆಗಾರ ರಾಜೇಶ್ ಪಡುಬಿದ್ರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಬೆಳಗ್ಗೆ 11:00ಗಂಟೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ರಾಮುಲು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಅಪ್ಪು ಮರ್ಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಸುಳ್ಯ ಶಾಸಕ ಅಂಗಾರ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಹಾಗೂ ಇತರ ಜನಪ್ರತಿನಿಧಿಗಳು, ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಜಿಲ್ಲೆಯಲ್ಲಿರುವ ಮೊಗೇರ ಜನಾಂಗದ ಆರಾಧ್ಯ ಕ್ಷೇತ್ರಗಳಾಗಿ ರುವ ಶ್ರೀಬ್ರಹ್ಮಮುರ್ಗ್ಗೇಕಳ ದೈವಸ್ಥಾನಗಳ ಜೀರ್ಣೋದ್ಧಾರಕ್ಕೆ ಚಾಲನೆ, ಜನಾಂಗದ ಬಡಕುಟುಂಬಗಳ ವಿವಾಹ ಹಾಗೂ ಸಂಘದ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ‘ಮೊಗೇರ ಸಮುದಾಯ ಭವನ’ಕ್ಕಾಗಿ ಸಚಿವರ ಮೂಲಕ ಸರಕಾರದ ಮುಂದೆ ಬೇಡಿಕೆ ಮಂಡಿಸಲಿದ್ದೇವೆ ಎಂದರು.

ಸಭಾ ಕಾರ್ಯಕ್ರಮ ಪ್ರಾರಂಭಕ್ಕೆ ಮುನ್ನ ಬೆಳಗ್ಗೆ 9ರಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಜೇಶ್ ಪಡುಬಿದ್ರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಅಪ್ಪು ಮರ್ಣೆ, ಉಪಾಧ್ಯಕ್ಷ ರಾಜು ಪಡುಬೆಳ್ಳೆ, ಖಜಾಂಚಿ ದಿನೇಶ್ ಕೆಮ್ಮಣ್ಣು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News