×
Ad

ಅಂತರ್ ಕಾಲೇಜು ಸ್ಪರ್ಧೆಯಿಂದ ಯಕ್ಷಗಾನದ ಉಳಿವು: ಭಾಸ್ಕರ ರೈ ಕುಕ್ಕುವಳ್ಳಿ

Update: 2020-03-09 22:47 IST

ಮಂಗಳೂರು, ಮಾ.9: ನಾಡಿನ ಪಾರಂಪರಿಕ ಕಲೆಯಾದ ಯಕ್ಷಗಾನದ ಬಗ್ಗೆ ಎಳೆಯ ತಲೆಮಾರಿಗೆ ಅಭಿರುಚಿ ಮೂಡಿಸುವ ಕೆಲಸವನ್ನು ಅಲ್ಲಲ್ಲಿ ನಡೆಯುವ ಯಕ್ಷಗಾನ ಸ್ಪರ್ಧೆಗಳು ಮಾಡಿವೆ. ಶಾಲಾ ಕಾಲೇಜುಗಳಲ್ಲೂ ಯಕ್ಷಗಾನದ ಚಟುವಟಿಕೆಗಳು ನಿರಂತರ ನಡೆಯುವುದರಿಂದ ವಿದ್ಯಾವಂತ ಯುವಕ ಯುವತಿಯರು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಂತರ್‌ಕಾಲೇಜು ಯಕ್ಷಗಾನ ಸ್ಪರ್ಧೆಗಳನ್ನು ನಡೆಸು ವುದರಿಂದ ಯಕ್ಷಗಾನದ ಉಳಿವು ಸಾಧ್ಯ’ ಎಂದು ಯಕ್ಷಗಾನದ ಹವ್ಯಾಸಿ ಕಲಾವಿದ ಮತ್ತು ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

 ಎ.ಜೆ. ಇನ್‌ಸ್ಟ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವತಿಯಿಂದ ಇತ್ತೀಚೆಗೆ ನಗರದ ಕೊಟ್ಟಾರ ಎ.ಜೆ.ಐ.ಇ.ಟಿ. ಮುಖ್ಯ ವೇದಿಕೆಯಲ್ಲಿ ಏರ್ಪಡಿಸಲಾದ ‘ಆಕಾರ್-2020’ ಸಾಂಸ್ಕೃತಿಕ ಉತ್ಸವದ ಅಂಗವಾಗಿ ನಡೆದ ‘ಎಜೆಐಇಟಿ ಯಕ್ಷಮಿಲನ’ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಡಾ.ಶಾಂತಾರಾಮ್ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸ್ಪರ್ಧಾ ವಿಜೇತರು: ಸ್ಪರ್ಧೆಯಲ್ಲಿ ಐದು ತಂಡಗಳು ಭಾಗವಹಿಸಿ ತಲಾ 1 ಗಂಟೆ ಅವಧಿಯ ಪ್ರಸಂಗಗಳನ್ನು ಪ್ರದರ್ಶಿಸಿದ್ದವು. ಅದರಲ್ಲಿ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಸ್ತು ಪಡಿಸಿದ ‘ಸುಧನ್ವ ಮೋಕ್ಷ’ ಪ್ರಥಮ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜು ವಿದ್ಯಾರ್ಥಿ ತಂಡದ ‘ಲವಣಾಸುರ-ಕುಶಲವ’ ದ್ವಿತೀಯ ಬಹುಮಾನ ಗಳಿಸಿತು. ವೈಯಕ್ತಿಕ ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು (ಕಿರೀಟ ವೇಷ), ಕಾರ್‌ಸ್ಟ್ರೀಟ್ ಸರಕಾರಿ ಕಾಲೇಜು (ಹಾಸ್ಯ), ಸುರತ್ಕಲ್‌ನ ಗೋವಿಂದದಾಸ್ ಕಾಲೇಜು (ಪಕಡಿ ಮತ್ತು ಸ್ತ್ರೀವೇಷ), ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಕಾಲೇಜು (ಬಣ್ಣದ ವೇಷ) ಬಹುಮಾನ ಗಳಿಸಿದವು.

ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜು ತಂಡಕ್ಕೆ ಸಮಾಧಾನಕರ ಬಹುಮಾನ ನೀಡಲಾಯಿತು. ಭಾಗವತ ಯೋಗೀಶ್ ಹೊಳ್ಳ ಆಳದಂಗಡಿ ತೀರ್ಪುಗಾರರಾಗಿ ಸಹಕರಿಸಿದರು. ಪ್ರಾಧ್ಯಾಪಕ ಡಾ.ರಾಜೇಶ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ಡಾ.ವಸಂತ್ ಕೆ.ಆರ್. ವಂದಿಸಿದರು. ಶ್ರೇಯಸ್ ಎಚ್. ಮತ್ತು ಶರಣ್ಯಾ ಪಿ.ಎಸ್.ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News