ನಾವು ಕಾಗದವೂ ನೀಡಲ್ಲ, ಮಾಹಿತಿಯೂ ನೀಡಲ್ಲ: ಸ್ವಾತಿ ಖನ್ನಾ
ಭಟ್ಕಳ: ‘ಹಮ್ ಕಾಗಝ್ ನಹಿ ದಿಖಾಯೆಂಗೆ’ ಎನ್ನುವುದು ನಮ್ಮ ಘೋಷಣೆಯಾಗಿದ್ದು ಎನ್ಪಿಆರ್ ಮಾಹಿತಿ ಸಂಗ್ರಹಕಾರರು ನಮ್ಮ ಮನೆಗೆ ಬಂದು ನಮಗೆ ಕಾಗದ (ದಾಖಲೆ) ತೋರಿಸಲು ಹೇಳುವುದಿಲ್ಲ. ಅವರು ನಮ್ಮ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಆದ್ದರಿಂದ ನಾವು ಕಾಗದವೂ ನೀಡಲ್ಲ ಕಾಗದದ ಮೇಲೆ ಯಾವುದೇ ಮಾಹಿತಿಯೂ ನೀಡಲ್ಲ ಎಂದು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಸ್ವಾತಿ ಖನ್ನಾ ಹೇಳಿದರು.
ಅವರು ಸೋಮವಾರ ನವಾಯತ್ ಕಾಲನಿ ಅಂಜುಮನ್ ಶಾಲಾ ಮೈದಾನದಲ್ಲಿ ಸಿಎಎ, ಎನ್‍ಆರ್ಸಿ, ಎನ್ಪಿಆರ್ ವಿರುದ್ಧ ಜರಗಿದ ಬೃಹತ್ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಇಲ್ಲಿನ ಹಿಂದೂ-ಮುಸ್ಲಿಂ ಯಾರೇ ಆಗಲಿ ಒಂದು ವೇಳೆ ಅವರು ತಾವು ಇಲ್ಲಿನ ನಿವಾಸಿಗಳು ಎಂದು ಸಾಬೀತು ಪಡಿಸಲು ಸಾಧ್ಯವಾಗಿಲ್ಲ ಎಂದರೆ ಅವರನ್ನು ಬಂಧನ ಕೇಂದ್ರಗಳಿಗೆ ಕಳಿಸಲಾಗುವುದು ನಂತರ ನಾವು ಈ ದೇಶದ ನಿವಾಸಿಗಳು ಎಂದು ಸಾಬೀತುಪಡಿಸಿ ಕೋರ್ಟು ಕಚೇರಿಗಳಿಗೆ ಸುತ್ತಬೇಕಾಗುತ್ತದೆ ಆದ್ದರಿಂದ ಇದು ಈ ದೇಶದ ಎಲ್ಲರಿಗೂ ಅಪಾಯವನ್ನು ತಂದೊಡ್ಡುತ್ತಿದೆ ಎಂದರು.
ಖ್ಯಾತ ವಿದ್ವಾಂಸ ಮೌಲಾನ ಸಜ್ಜಾದ್ ನೊಮಾನಿಯವರ ಪುತ್ರಿ ಸುಮಯ್ಯ ನೊಮಾನಿ ಮಾತನಾಡಿ, ಭಾತರ ದೇಶ ಐತಿಹಾಸಿಕ ಕಾಲಘಟ್ಟದ ನಿರ್ಣಯ ಹಂತಕ್ಕೆ ಬಂದು ನಿಂತುಕೊಂಡಿದ್ದು ಮುಂಬರುವ ಸವಾಲುಗಳನ್ನು ಎದುರಿಸಲು ಮಹಿಳೆಯರು ಸಿದ್ಧರಾಗುವಂತೆ ಮಹಿಳೆಯರಿಗೆ ಕರೆ ನೀಡಿದರು.
ಬಿಬಿ ರುಖಿಯಾ ರವರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸನಿಲಾ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು. ನಬಿರಾ ಮೊಹತೆಶಮ್ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸೀಮಾ ಕಾಸಿಮಜಿ, ಖಮರುನ್ನಿಸಾ ಮುನಿರಿ, ಸಾಜಿದಾ ಅಂಜುಮನ್, ರುಫೆದಾ ರುಕ್ನುದ್ದೀನ್, ಮೊಯಿನಾ ಬಾತಿನ್, ಬತೂಲ್ ಶಬಾನ ಮತ್ತಿತರರು ಉಪಸ್ಥಿತರಿದ್ದರು.