×
Ad

ಗಂಭೀರ ಪ್ರಕರಣಗಳನ್ನು ಹಿಂಪಡೆದ ಬಿಜೆಪಿ ಸರಕಾರದಿಂದ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು: ಎಸ್‌ಡಿಪಿಐ ಆರೋಪ

Update: 2020-03-10 18:11 IST

ಮಂಗಳೂರು, ಮಾ.10: ರಾಜ್ಯ ಬಿಜೆಪಿ ಸರಕಾರವು 46 ಕ್ರಿಮಿನಲ್ ಪ್ರಕರಣಗಳನ್ನು ಹಿಂಪೆಡೆಯುವ ಆದೇಶ ಹೊರಡಿಸುವ ಮೂಲಕ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಪಾದಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು ಕ್ರಿಮಿನಲ್ ಪ್ರಕರಣವನ್ನು ಸರಕಾರವೇ ಹಿಂದಕ್ಕೆ ಪಡೆಯುವುದಾದರೆ ಕಾನೂನು ಯಾಕೆ, ನ್ಯಾಯಾಲಯ ಯಾಕೆ? ದೌರ್ಜನ್ಯಕ್ಕೀಡಾದವರಿಗೆ ಎಲ್ಲಿದೆ ನ್ಯಾಯ? ಹೀಗಾದಲ್ಲಿ ಹಲ್ಲೆ, ಹಿಂಸೆ, ದೌರ್ಜನ್ಯಕ್ಕೆ ಒಳಗಾದವರು ದೂರು ನೀಡಲು ಮುಂದೆ ಬರಬಹುದೇ ? ಎಂದು ಪ್ರಶ್ನಿಸಿದರು.

ರಾಜ್ಯ ಸರಕಾರ ಹಿಂದಕ್ಕೆ ಪಡೆದ 46 ಪ್ರಕರಣಗಳಲ್ಲಿ 35 ಸಂಘಪರಿವಾರದ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಪ್ರಕರಣಗಳಾಗಿವೆ. 2006ರಿಂದ ಈವರೆಗೆ ಸುಮಾರು 500 ಪ್ರಕರಣಗಳನ್ನು ರಾಜ್ಯ ಸರಕಾರಗಳು ಹಿಂದಕ್ಕೆ ಪಡೆದಿದೆ. ಅದರಲ್ಲಿ 391 ಪ್ರಕರಣಗಳು ಬಿಜೆಪಿ ಮತ್ತು ಸಂಘ ಪರಿವಾರದವರ ಮೇಲೆ ದಾಖಲಾದವುಗಳಾಗಿವೆ. ಹಿಂದುತ್ವವಾದಿ ಪ್ರಮೋದ್ ಮುತಾಲಿಕ್ ವಿರುದ್ಧ ದಾಖಲಾಗಿದ್ದ 50ಕ್ಕೂ ಅಧಿಕ ಪ್ರಕರಣವನ್ನು ಹಿಂದಕ್ಕೆ ಪಡೆಯಲಾಗಿದೆ. ಜಗದೀಶ್ ಕಾರಂತ್ ವಿರುದ್ಧದ ಪ್ರಕರಣವನ್ನೂ ಕೈ ಬಿಡಲಾಗಿದೆ. ಬಿಜೆಪಿಯ ನಾಯಕರು, ಹಾಲಿ ಸಚಿವರು, ಶಾಸಕರಾದ ಕೆಎಸ್ ಈಶ್ವರಪ್ಪ, ಶ್ರೀರಾಮುಲು, ಜನಾರ್ದನ ರೆಡ್ಡಿ, ಅನಿಲ್ ಲಾಡ್, ರೇಣುಕಾಚಾರ್ಯ, ಕೃಷ್ಣಯ್ಯ ಶೆಟ್ಟಿ, ಸೊಗಡು ಶಿವಣ್ಣ, ಸುನೀಲ್ ಕುಮಾರ್ ಮತ್ತಿತರರ ಮೇಲಿದ್ದ ಪ್ರಕರಣವನ್ನು ಕೂಡ ಹಿಂದಕ್ಕೆ ಪಡೆಯಲಾಗಿದೆ. ಹೀಗೆ ಒಂದು ಸರಕಾರ ಪ್ರಕರಣ ದಾಖಲಿಸುವುದು ಮತ್ತು ಇನ್ನೊಂದು ಸರಕಾರವು ಪ್ರಕರಣವನ್ನು ಕೈ ಬಿಡುವುದು ಹಾಸ್ಯಾಸ್ಪದವಾಗಿದೆ. ಸರಕಾರದ ಈ ನಡೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದರು.

ಕಾಂಗ್ರೆಸ್ ಸರಕಾರವು ಪಿಎಫ್‌ಐ, ಎಸ್‌ಡಿಪಿಐ ಮೇಲಿನ ಪ್ರಕರಣವನ್ನು ಹಿಂದಕ್ಕೆ ಪಡೆಯುತ್ತಿದೆ ಎಂದು ಈ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಆರೋಪಿಸುತ್ತಿದ್ದರು. ಆದರೆ, ಈವರೆಗೆ ಕಾಂಗ್ರೆಸ್ ಸರಕಾರವು ಪಿಎಫ್‌ಐ-ಎಸ್‌ಡಿಪಿಐ ಮೇಲೆ ದಾಖಲಾಗಿದ್ದ ಕೇವಲ 3 ಪ್ರಕರಣವನ್ನು ಮಾತ್ರ ವಾಪಸ್ ಪಡೆದಿದೆ. ರಾಜ್ಯ ಸರಕಾರ ಮೊನ್ನೆ ವಾಪಸ್ ಪಡೆದ ಪ್ರಕರಣಗಳಲ್ಲಿ ಬಹುತೇಕ ಕೊಲೆಯತ್ನ, ಮಾರಣಾಂತಿಕ ಹಲ್ಲೆ, ದೊಂಬಿ, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತಹ ಹಾಗೂ ವಾಹನಗಳನ್ನು ಸುಟ್ಟ ಮತ್ತು ಇತರ ಗಂಭೀರ ಕ್ರಿಮಿನಲ್ ಅಪರಾಧ ಘಟನೆಗಳು ಸೇರಿವೆ ಎಂದರು.

ಉಪ್ಪಿನಂಗಡಿಯ ಮುಹಮ್ಮದ್ ಹಾರಿಸ್‌ನ ಮೇಲೆ ತಲವಾರಿನಿಂದ ಕಡಿದು ಕೊಲೆಗೆ ಯತ್ನ, ಅರಣ್ಯಾಧಿಕಾರಿ ಶಿವಶಂಕರ್ ಮೇಲೆ ಹಲ್ಲೆ ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪ್ರಕರಣ, ಮಡಿಕೇರಿ ಆಸ್ಪತ್ರೆಯ ಆವರಣದಲ್ಲಿ ವಾಹನಕ್ಕೆ ಬೆಂಕಿ ಕೊಟ್ಟ ಪ್ರಕರಣ, ಹೊಳೆನರಸೀಪುರ ನಗರ ಠಾಣೆಯೊಳಗೆ ದೂರುದಾರರ ಮೇಲೆ ಪೊಲೀಸರೆದುರು ಹಲ್ಲೆಗೈದ ಪ್ರಕರಣ, ಕುಮಟಾದಲ್ಲಿ ಐಜಿಪಿಯ ಕಾರಿಗೆ ಬೆಂಕಿ ಹಚ್ಚಿದ್ದಲ್ಲದೆ ಕಾರಿನ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮುಂತಾದ ಹಲವು ಗಂಭೀರ ಅಪರಾಧ ಪ್ರಕರಣಗಳು ಒಳಗೊಂಡಿವೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.

ಇಂತಹ ಬೆಳವಣಿಗೆಗೆಳು ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ಭಾರೀ ಅಪಾಯವನ್ನುಂಟು ಮಾಡಲಿದೆ. ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗು ವವರಿಗೆ ಭಯ ಇಲ್ಲದಂತಾಗುತ್ತದೆ. ಸರಕಾರ ತಮ್ಮ ಮೇಲಿನ ಪ್ರಕರಣಗಳನ್ನು ಹಿಂಪಡೆಯುತ್ತವೆ ಎಂಬ ವಿಶ್ವಾಸದಿಂದ ಸಮಾಜ ಘಾತುಕ ಕೃತ್ಯಗಳು ಎಗ್ಗಿಲ್ಲದೆ ನಡೆಯಲಿದೆ ಎಂದ ತುಂಬೆ, ದಾಳಿ, ಹಲ್ಲೆ, ನಷ್ಟ, ಅವಮಾನ, ಸಾವು-ನೋವುಗಳಿಗೊಳಗಾದ ಸಂತ್ರಸ್ತರ ಒಪ್ಪಿಗೆಗೆ ವಿರುದ್ಧವಾಗಿ ಸರಕಾರಗಳು ಪ್ರಕರಣಗಳನ್ನು ಹಿಂಪಡೆಯುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್, ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐಎಂಆರ್, ಶರೀಫ್ ಪಾಂಡೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News