ಲೆಕ್ಕ ತಪ್ಪಿದರೆ ದುಃಖ ತಪ್ಪದು: ಪ್ರಸಾದ್ ಶೆಟ್ಟಿ ಕುತ್ಯಾರು
ಶಿರ್ವ, ಮಾ.10: ಕೃಷಿ ಬೆಳೆಗಳಿಗೆ ಮಹತ್ವ ಕೊಟ್ಟ ಹಾಗೆ ಕೃಷಿಕರು ಜಮೀನಿನ ದಾಖಲೆಗಳು, ಲೆಕ್ಕ-ಪತ್ರ, ಸಾಲ ವ್ಯವಹಾರಗಳನ್ನೂ ಸಮರ್ಪಕವಾಗಿ ಕಾನೂನು ಬದ್ಧ ರೀತಿಯಲ್ಲಿಟ್ಟುಕೊಂಡರೆ ಹಲವು ರೀತಿಯ ಸಂಕಷ್ಟಗಳಿಂದ ಪಾರಾಗಬ ಹುದಾಗಿದೆ ಎಂದು ಶಿರ್ವ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ಕುತ್ಯಾರು ಹೇಳಿದ್ದಾರೆ.
ಜಿಲ್ಲಾ ಕೃಷಿಕ ಸಂಘ ಶಿರ್ವ ವಲಯ ಸಮಿತಿ, ಬೆಳಂಜಾಲೆ ಬಾಬುರಾಯ ನಾಯಕ್ ನಾಲ್ಕೂರು ಇವರ ಮನೆ ವಠಾರದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಮಲ್ಲಿಗೆ ಕೃಷಿ ಮಾಹಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಿಮ್ಮೆಲ್ಲಾ ದಾಖಲೆಪತ್ರಗಳು ಸಮರ್ಪಕವಾಗಿದ್ದರೆ, ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ, ಶೇ.3 ಬಡ್ಡಿದರದಲ್ಲಿ ಅಲ್ಪಾವಧಿ, ಧೀರ್ಘಾವಧಿ ಸಾಲ ಪಡೆಯಲು ಯಾವುದೇ ಸಮಸ್ಯೆ ಇರುವುದಿಲ್ಲ. ಜಮೀನು ದಾಖಲೆಗಳೆಲ್ಲ ಸರಿ ಇರದಾಗ ವಿತ್ತೀಯ ಸಂಸ್ಥೆಗಳು ಕೃಷಿಸಾಲ ಕೊಡಲು ಅಸಹಾಯ ಕವಾಗುತ್ತವೆ. ಕೃಷಿಕರು ಸಂಕಷ್ಟ ಅನುಭವಿಸುತ್ತಾರೆ. ತಮ್ಮ ಸಹಕಾರಿ ಸಂಘ ಮಲ್ಲಿಗೆ ಕೃಷಿಗೆ ಪ್ರೋತ್ಸಾಹ ನೀಡಲು ಗಿಡವೊಂದಕ್ಕೆ ಒಂದು ಸಾವಿರ ರೂ.ಬೆಳೆಸಾಲ ನೀಡುತ್ತಿದೆ ಎಂದರು.
ನಾಲ್ಕೂರು ಬಾಬುರಾಯ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ರಮೇಶ್ ಪ್ರಭು ಮತ್ತು ಹರೀಶ್ ಪಾಟ್ಕರ್ ಭಾಗವಹಿಸಿದ್ದರು. ಸದಾನಂದ ನಾಯಕ್, ನಿರ್ಮಲ, ದೇವಣ್ಣ ಮಾಸ್ತರ್, ಸಂದೀಪ್, ಗಿರಿಜಾ ಟೀಚರ್, ಶೋಭಾ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮತ್ತು ರಾಘವೇಂದ್ರ ನಾಯಕ್ ಕಲ್ಲೊಟ್ಟು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಡಿಮೆ ಖರ್ಚಿನಲ್ಲಿ ವೈಜ್ಞಾನಿಕ ವಾಗಿ ಲಾಭದಾಯಕ ಮಲ್ಲಿಗೆ ಕೃಷಿ ಮಾಡುವ ವಿಧಾನಗಳು, ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕುರಿತು ಸಮಗ್ರ ಮಾಹಿತಿ ನೀಡಿದರು.
ಹರೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.