ಡಾ. ಮೋಹನ್ ಆಳ್ವರಿಗೆ ಮುದ್ರಾಡಿ ನಾಟ್ಕ ಸಂಮಾನ ರಾ. ಪ್ರಶಸ್ತಿ
ಹೆಬ್ರಿ, ಮಾ.10: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ವತಿಯಿಂದ ಮುದ್ರಾಡಿ ನಾಟ್ಕದೂರಿನಲ್ಲಿ ನಡೆದಿರುವ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-10ರ ಸಮಾರೋಪ ಸಮಾರಂಭದಲ್ಲಿ ಮೂಡಬಿದರೆ ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅವರಿಗೆ ‘ಮುದ್ರಾಡಿ ನಾಟ್ಕ ಸಂಮಾನ-2020’ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷರಾದ ರಂಗ ನಟ ನಿರ್ದೇಶಕ ಸುಕುಮಾರ್ ಮೋಹನ್ ತಿಳಿಸಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ-10ರ ಸಮಾರೋಪ ಸಮಾರಂಭ ಮಾ.12ರ ಸಂಜೆ ಮುದ್ರಾಡಿ ನಾಟ್ಕದೂರಿನ ಆರೂರು ಕೃಷ್ಣಮೂರ್ತಿ ರಾವ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ನಾಡಿನ ಬಹುದೊಡ್ಡ ಕಲಾ ಪೋಷಕ, ಆರೋಗ್ಯ, ಶಿಕ್ಷಣ, ಧಾರ್ಮಿಕ, ಕಲೆ, ಸಾಹಿತ್ಯ ಕ್ಷೇತ್ರದ ಸಾಧಕರಾಗಿರುವ ಡಾ.ಆಳ್ವರಿಗೆ ಈ ಬಾರಿಯ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದವರು ಹೇಳಿದ್ದಾರೆ.
ಮಂಗಳೂರಿನ ಉದ್ಯಮಿ ಡಾ.ಆರೂರು ಪ್ರಸಾದ್ ರಾವ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಖ್ಯಾತ ಕಲಾ ನಿರ್ದೇಶಕ, ಬೆಂಗಳೂರಿನ ಶಶಿಧರ ಅಡಪ, ಮುಂಬೈ ಉದ್ಯಮಿ ಮುದ್ರಾಡಿ ದಿವಾಕರ ಎನ್ ಶೆಟ್ಟಿ, ಯೆಯ್ಯಿಡಿ ಸುರೇಶ ಶೆಟ್ಟಿ ಮುಂಬೈ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಉದ್ಯಾವರ ನಾಗೇಶ್ ಕುಮಾರ್, ಬೆಂಗಳೂರಿನ ಜೋಗಿಲ ಸಿದ್ಧರಾಜು ಭಾಗವಹಿಸಲಿದ್ದಾರೆ.
ಸಂಜೆ 5:30ಕ್ಕೆ ಮುದ್ರಾಡಿ ಗಣಪತಿ ದೇವಸ್ಥಾನದಿಂದ ನಾಟ್ಕದೂರಿನವರೆಗೆ ನಾಡಿನ ವಿವಿಧ ಜನಪದ ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಸುಕುಮಾರ್ ಮೋಹನ್ ತಿಳಿಸಿದ್ದಾರೆ.