ಹೋಳಿ ಆಚರಿಸಿದ ಬಳಿಕ ಕೆರೆಯಲ್ಲಿ ಮುಳುಗಿ 4 ಮಕ್ಕಳು ಮೃತ್ಯು

Update: 2020-03-10 15:44 GMT
ಫೈಲ್ ಚಿತ್ರ

ಕೋಲ್ಕತಾ, ಮಾ.10: ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದ 4 ಮಕ್ಕಳು ಬಳಿಕ ಕೆರೆಯಲ್ಲಿ ಈಜಲು ತೆರಳಿದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ತಹೇರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಮಾಲ್ ದಾಂಗ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸೋಮವಾರ ಬಣ್ಣಗಳ ಹಬ್ಬದಲ್ಲಿ ಪಾಲ್ಗೊಂಡಿದ್ದ 9ರಿಂದ 13 ವರ್ಷದ 6 ಮಕ್ಕಳು ಕೆರೆಯಲ್ಲಿ ಈಜಲು ತೆರಳಿದ್ದು ಇಬ್ಬರು ಮಕ್ಕಳು ನೀರಿಗೆ ಇಳಿದಿರಲಿಲ್ಲ. ನಾಲ್ವರು ಮಕ್ಕಳು ನೀರಲ್ಲಿ ಮುಳುಗಿದ್ದಾರೆ. ಇದರಿಂದ ಗಾಬರಿಗೊಂಡ ಇಬ್ಬರು ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಧಾವಿಸಿ ಬಂದು ಮಕ್ಕಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದು ಆ ವೇಳೆಗಾಗಲೇ ಮಕ್ಕಳು ಮೃತರಾಗಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ.

ಈ ವರ್ಷದ ಮಳೆಗಾಲಕ್ಕೂ ಮುನ್ನ ಈ ಕೆರೆಯಲ್ಲಿ ಹೂಳೆತ್ತಿ ಆಳಗೊಳಿಸಲಾಗಿದ್ದು ಈಜಾಟ ನಿಷೇಧಿಸಲಾಗಿತ್ತು. ಮಕ್ಕಳು ಮನೆಯವರಿಗೆ ತಿಳಿಸದೆ ಈಜಲು ಇಳಿದಿದ್ದರು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News