ಕೊರೊನಾ ವೈರಸ್ ಭೀತಿ: ಇರಾನ್‌ನಿಂದ 58 ಭಾರತೀಯರನ್ನು ಕರೆತಂದ ವಾಯುಪಡೆ ವಿಮಾನ

Update: 2020-03-10 15:53 GMT

ಹೊಸದಿಲ್ಲಿ, ಮಾ.10: ಕೊರೊನಾ ವೈರಸ್ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ವಿಮಾನ ಇರಾನ್‌ನಿಂದ 58 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ವಿಮಾನವನ್ನು ಸೋಮವಾರ ಸಂಜೆ ಟೆಹ್ರಾನ್‌ಗೆ ಕಳುಹಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಕೊರೊನ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಇರಾನ್‌ನಲ್ಲಿ ಸುಮಾರು 2,000 ಭಾರತೀಯರಿದ್ದಾರೆ.

ಇರಾನ್‌ನಲ್ಲಿರುವ 58 ಭಾರತೀಯರ ಪ್ರಥಮ ತಂಡ ಭಾರತೀಯ ವಾಯುಪಡೆಯ ವಿಮಾನದಲ್ಲಿ ಟೆಹ್ರಾನ್‌ನಿಂದ ಹೊರಟು ಘಾಜಿಯಾಬಾದ್ ಬಳಿಯ ಹಿಂಡನ್ ವಾಯುನೆಲೆ ತಲುಪಿದೆ. ಇರಾನ್ ನಲ್ಲಿರುವ ನಮ್ಮ ರಾಯಭಾರಿ ಕಚೇರಿಯವರು ಕಠಿಣ ಸ್ಥಿತಿಯಲ್ಲೂ ಕಾರ್ಯ ನಿರ್ವಹಿಸಿದ್ದಕ್ಕೆ ಅಭಿನಂದನೆಗಳು ಎಂದು ಭಾರತದ ವಿದೇಶ ವ್ಯವಹಾರ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಹಿಂಡನ್ ವಾಯುನೆಲೆ ತಲುಪಿರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

 ಚೀನಾದ ವುಹಾನ್ ನಗರದಲ್ಲಿದ್ದ 76 ಭಾರತೀಯರನ್ನು ಹಾಗೂ 36 ವಿದೇಶಿಯರನ್ನು ಫೆಬ್ರವರಿ 27ರಂದು ಸಿ-17 ಗ್ಲೋಬಲ್‌ಮಾಸ್ಟರ್ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News