ಇಟಲಿ: ದೇಶಾದ್ಯಂತ ಬೀಗಮುದ್ರೆ
ರೋಮ್ (ಇಟಲಿ), ಮಾ. 10: ಮಾರಕ ಕೊರೋನವೈರಸ್ ಸೋಂಕು ಹರಡುವುದನ್ನು ತಡೆಯಲು ಅಸಾಧಾರಣ ಕ್ರಮಗಳನ್ನು ಕೈಗೊಂಡಿರುವ ಇಟಲಿ, ಮಂಗಳವಾರ ಇಡೀ ದೇಶದಲ್ಲಿ ಬೀಗಮುದ್ರೆ ಘೋಷಿಸಿದೆ ಹಾಗೂ ಜನರ ಸಂಚಾರವನ್ನು ನಿರ್ಬಂಧಿಸಿದೆ.
ಮದುವೆ ಮತ್ತು ಅಂತ್ಯಸಂಸ್ಕಾರಗಳನ್ನು ಮೂರು ವಾರಗಳಿಗೂ ಅಧಿಕ ಅವಧಿಗೆ ನಿಷೇಧಿಸಲಾಗಿದೆ ಹಾಗೂ ಸಂಜೆ 6 ಗಂಟೆಗೆ ಮುಚ್ಚುವಂತೆ ಬಾರ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಸೂಚಿಸಲಾಗಿದೆ. ಮನೆಯಲ್ಲೇ ಉಳಿಯುವಂತೆ ಪ್ರಧಾನಿ ದೇಶದ ಜನತೆಯನ್ನು ಒತ್ತಾಯಿಸಿದ್ದಾರೆ.
ಈ ಮೊದಲು, ಇಟಲಿಯ ಹಲವು ಪ್ರದೇಶಗಳಲ್ಲಿ ಜಾರಿಯಲ್ಲಿದ್ದ ಬೀಗಮುದ್ರೆಯನ್ನು ಈಗ ಇಡೀ ದೇಶಕ್ಕೆ ವಿಸ್ತರಿಸಲಾಗಿದೆ. ಈ ನಿರ್ಬಂಧವು ಎಪ್ರಿಲ್ 3ರವರೆಗೆ ಚಾಲ್ತಿಯಲ್ಲಿರುತ್ತದೆ. ಇಟಲಿಯ 6 ಕೋಟಿಗೂ ಅಧಿಕ ಜನಸಂಖ್ಯೆಯ ಚಲನವಲನಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಆದೇಶಕ್ಕೆ ಸೋಮವಾರ ರಾತ್ರಿ ಸಹಿ ಹಾಕಲಾಗಿದೆ.
ಯುರೋಪ್‌ನಲ್ಲಿ ಇಟಲಿಯು ಕೊರೋನವೈರಸ್‌ನಿಂದ ಅತಿ ಹೆಚ್ಚು ಬಾಧೆಗೊಳಗಾದ ದೇಶವಾಗಿದೆ. ಅಲ್ಲಿ ಈವರೆಗೆ 400ಕ್ಕೂ ಅಧಿಕ ಸಾವುಗಳು ಸಂಭವಿಸಿವೆ ಹಾಗೂ 9,000ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ.
‘‘ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಕಾರಣಕ್ಕಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ’’ ಎಂದು ಆದೇಶ ತಿಳಿಸಿದೆ. ಎಲ್ಲಾ ಮಟ್ಟಗಳಲ್ಲಿ ನಡೆಯುವ ಎಲ್ಲಾ ಕ್ರೀಡಾಕೂಟಗಳನ್ನು ರದ್ದುಪಡಿಸಲಾಗಿದೆ.
ಆರೋಗ್ಯ ಕಾರಣಗಳಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ
ಹೊಸ ನಿಯಮಗಳ ಪ್ರಕಾರ, ಅತಿ ತುರ್ತು ಕೆಲಸಗಳು ಅಥವಾ ಆರೋಗ್ಯ ಕಾರಣಗಳಿಗಾಗಿ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಬೇರೆ ಸ್ಥಳಗಳಿಂದ ತಮ್ಮ ಮನೆಗಳಿಗೆ ವಾಪಸಾಗಲು ಜನರಿಗೆ ಅವಕಾಶ ನೀಡಲಾಗಿದೆ.
ಶಾಲೆಗಳು ಮತ್ತು ಕಾಲೇಜುಗಳಿಗೆ ತಕ್ಷಣದಿಂದ ರಜೆ ಸಾರಲಾಗಿದೆ ಹಾಗೂ ಉದ್ಯೋಗಿಗಳಿಗೆ ರಜೆ ನೀಡುವಂತೆ ಉದ್ಯಮಗಳನ್ನು ಒತ್ತಾಯಿಸಲಾಗಿದೆ.
ಜೈಲುಗಳಲ್ಲಿ ದೊಂಬಿ: ಹಲವು ಕೈದಿಗಳು ಸಾವು
ಇಟಲಿಯನ್ನು ಕೊರೋನವೈರಸ್ ಸಾಂಕ್ರಾಮಿಕ ಆವರಿಸಿರುವಂತೆಯೇ, ಅಲ್ಲಿನ ಜೈಲುಗಳಲ್ಲಿರುವ ಕೈದಿಗಳು ಭಯಭೀತರಾಗಿದ್ದಾರೆ. ಅಲ್ಲಿನ 23 ಜೈಲುಗಳಲ್ಲಿ ಕೈದಿಗಳು ಗಲಭೆ ನಡೆಸಿದ್ದು ಹಲವಾರು ಮಂದಿ ಮೃತಪಟ್ಟಿದ್ದಾರೆ.
ಕೊರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತಮಗೆ ಕ್ಷಮಾದಾನ ನೀಡಬೇಕೆಂದು ಕೆಲವು ಕೈದಿಗಳು ಒತ್ತಾಯಿಸುತ್ತಿದ್ದಾರೆ.