×
Ad

ಆಪರೇಷನ್ ಕಮಲದ ಮುಂದಿನ ಸರದಿ ಕಾಂಗ್ರೆಸ್ ಆಡಳಿತದ ಈ ರಾಜ್ಯ?

Update: 2020-03-10 21:44 IST

ಹೊಸದಿಲ್ಲಿ, ಮಾ.10: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರಕ್ಕೆ ಸಂಕಷ್ಟ ಎದುರಾಗಿರುವಂತೆಯೇ, ರಾಜಸ್ತಾನದಲ್ಲಿ ಮುಂದಿನ ಆಪರೇಷನ್ ಕಮಲಕ್ಕೆ ವೇದಿಕೆ ರೂಪಿಸಲಾಗಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.

 ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮತ್ತು ಸಚಿನ್ ಪೈಲಟ್ ಉಪಮುಖ್ಯಮಂತ್ರಿಯಾಗಿರುವ ರಾಜಸ್ತಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತದ ಕೊರತೆ ಇರುವುದರಿಂದ ಇತರ ಪಕ್ಷಗಳ ಸದಸ್ಯರ ಬೆಂಬಲ ಅನಿವಾರ್ಯವಾಗಿದೆ. ಸಿಪಿಐ, ಪಕ್ಷೇತರರು, ಬಿಎಸ್ಪಿಯ ಬಂಡಾಯ ಶಾಸಕರು ಹಾಗೂ ಆರ್‌ಎಲ್‌ಡಿ ಪಕ್ಷಗಳ ಬೆಂಬಲದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಆದರೆ 80 ಶಾಸಕರ ಬೆಂಬಲ ಪಡೆದಿರುವ ಬಿಜೆಪಿ 20 ಶಾಸಕರ ಬೆಂಬಲ ಪಡೆಯಲು ಶಕ್ತವಾದರೆ ರಾಜಸ್ತಾನದಲ್ಲೂ ಕಾಂಗ್ರೆಸ್ ಸರಕಾರ ಪತನವಾಗುವ ಸಾಧ್ಯತೆಯಿದೆ.

 ಇತ್ತೀಚಿನ ಬೆಳವಣಿಗೆಯಲ್ಲಿ, ವಜ್ರೋದ್ಯಮಿ ರಾಜೀವ್ ಅರೋರಾರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಸಚಿನ್ ಪೈಲಟ್ ವಿರೋಧಿಸಿದ್ದಾರೆ. ಆದರೆ ಅರೋರಾ ಹೆಸರನ್ನು ಮುಖ್ಯಮಂತ್ರಿ ಗೆಹ್ಲೋಟ್ ಪ್ರಸ್ತಾವಿಸಿದ್ದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಅರೋರಾ ಬದಲು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂಬುದು ಸಚಿನ್ ಪೈಲಟ್ ನಿಲುವಾಗಿದೆ.

ಇದಕ್ಕೂ ಮೊದಲು ಗೆಹ್ಲೋಟ್ ಮತ್ತು ಪೈಲಟ್ ಮಧ್ಯೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು . ಈಗ ಹೈಕಮಾಂಡ್ ಎಚ್ಚರಿಕೆಯ ನಿರ್ಧಾರ ಕೈಗೊಳ್ಳದಿದ್ದರೆ ಮಧ್ಯಪ್ರದೇಶದಂತೆಯೇ ರಾಜಸ್ತಾನದಲ್ಲೂ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News