×
Ad

ಪರ್ಕಳ ಪರಿಸರದಲ್ಲಿ ಮತ್ತೆ ಒರತೆ ನೀರು: ತುಂಬಿದ ಕೆರೆ, ಬಾವಿಗಳು

Update: 2020-03-10 21:51 IST

ಮಣಿಪಾಲ, ಮಾ.10: ಈ ಸುಡುವ ಬಿಸಿಲಿನಲ್ಲೂ ಹೆರ್ಗ ಗ್ರಾಮದ ಪರ್ಕಳದ ಪರಿಸರದಲ್ಲಿ ಕೆರೆ ಹಾಗೂ ಬಾವಿಗಳು ತುಂಬಿದ್ದು, ತೋಡಿನಲ್ಲಿ ಶುದ್ಧ ನೀರು ಹರಿಯುತ್ತಿದೆ. 2015ರಲ್ಲಿ ಮೊದಲ ಬಾರಿಗೆ ಕಂಡು ಬಂದ ಈ ಪ್ರಕೃತಿಯ ವಿಸ್ಮಯ ಈ ವರ್ಷ ಮತ್ತೆ ಮರುಕಳಿಸಿದೆ.

ಕಳೆದ ವರ್ಷ ಜನವರಿಯಲ್ಲಿ ಬತ್ತಿ ಹೋದ ಪರ್ಕಳದ ಬೈದರೆಬೆಟ್ಟು ಕೆರೆಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಪರ್ಕಳ ತುಳಜಾ ಭವಾನಿ ದೇವಸ್ಥಾನದ ಬಳಿಯ ತೋಡಿನಲ್ಲಿ ನೀರು ಹರಿಯುತ್ತಿರುವುದು ಕಂಡು ಬಂದಿದೆ. ಅದೇ ರೀತಿ ಕೆಳಪರ್ಕಳದ ಹಲವು ಮನೆಗಳ ಬಾವಿಯಲ್ಲಿ ನೀರು ತುಂಬಿದೆ.

ಮೊದಲ ಬಾರಿಗೆ 2015ರಲ್ಲಿ ಈ ವಿಸ್ಮಯ ಕಂಡುಬಂದಿದ್ದು, ಅದರ ನಂತರ 2017ರಲ್ಲಿಯೂ ಇದು ಮರುಕಳಿಸಿತ್ತು. ಇದೀಗ ಮತ್ತೆ ಎರಡು ವರ್ಷಗಳ ನಂತರ ಈ ಒರತೆ ನೀರಿನಿಂದಾಗಿ ಪರ್ಕಳ ಪರಿಸರದ ಬಾವಿಗಳು ತುಂಬಿ ಹೋಗಿವೆ. ಅಲ್ಲದೆ 80 ಬಡಗಬೆಟ್ಟುವಿನಲ್ಲಿರುವ ಸೇತುವೆ ಕೆಳಗಿನ ತೋಡಿನಲ್ಲಿ ನೀರು ತುಂಬಿರುವುದು ಸಾಕಷ್ಟು ಆಶ್ಚರ್ಯಕ್ಕೆ ಕಾರಣವಾಗಿದೆ.

ಕೆಳಪರ್ಕಳದ ತೋಡಿನಲ್ಲಿ ನಿರಂತರವಾಗಿ ಹರಿಯುತ್ತಿರುವ ನೀರನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಪಂಪ್ ಆಳವಡಿಸಿ ನೀರು ತೆಗೆಯುವ ಮೂಲಕ ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಪರಿಶುದ್ಧ ನೀರು ಪರ್ಕಳದಿಂದ 80 ಬಡಗಬೆಟ್ಟು ಪರಿಸರಕ್ಕೆ ಹರಿದು ಹೋಗುತ್ತಿದ್ದು, ಇದನ್ನು ಸೂಕ್ತ ಸಮಯದಲ್ಲಿ ತಡೆಗಟ್ಟಿ ನೀರನ್ನು ಸದ್ಬಳಕೆ ಮಾಡಬೇಕೆಂದು ಸ್ಥಳೀಯರಾದ ಗಣೇಶ್‌ರಾಜ್ ಸರಳೇಬೆಟ್ಟು ಹಾಗೂ ಸುರೇಶ್ ಕಲ್ಯಾಣಪುರ ನಗರಸಭೆಯನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News