ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಜೈಶಂಕರ್‌ಗೆ ಚಿನ್ನದ ಪದಕ
ಉಡುಪಿ, ಮಾ.11: 2017ನೆ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಹಾಗೂ ಉಡುಪಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಜೈಶಂಕರ್ ಆಯ್ಕೆಯಾಗಿದ್ದಾರೆ.
ಬೆಂಗಳೂರು ದೇವನಹಳ್ಳಿಯ ನಿವಾಸಿಯಾಗಿರುವ ವಿಷ್ಣುವರ್ಧನ್, 2005 ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡರು. ವಿರಾಜಪೇಟೆಯಲ್ಲಿ ಡಿವೈಎಸ್ಪಿ ಯಾಗಿ ಸೇವೆ ಆರಂಭಿಸಿದ ಇವರು, ನಂತರ ಮೈಸೂರು, ಮಂಗಳೂರು, ಶಿವಮೊಗ್ಗ, ಕಾರ್ಕಳ ಎಎನ್‌ಎಫ್‌ನಲ್ಲಿ ಹಾಗೂ ಉಡುಪಿ, ಮಂಗಳೂರು, ಬೆಂಗಳೂರು ನಾಗರಿಕ ಹಕ್ಕು ನಿರ್ದೇಶನಾಲಯದಲ್ಲಿ ಹೆಚ್ಚುವರಿ ಎಸ್ಪಿಯಾಗಿ, ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ ದ್ದರು. 2015ರ ಐಪಿಎಸ್ ಅಧಿಕಾರಿಯಾಗಿರುವ ಇವರು, ಜ.3ರಂದು ಉಡುಪಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರು.
ಡಿವೈಎಸ್ಪಿ ಜೈಶಂಕರ್: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಯಾಗಿರುವ ಇವರು, 1996ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು, ಎಸ್ಸೈಯಾಗಿ ಹಲವು ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಇವರು 2002ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಮತ್ತು 2016ರಲ್ಲಿ ಡಿವೈಎಸ್ಪಿಯಾಗಿ ಭಡ್ತಿ ಪಡೆದರು. ಮಲ್ಪೆ ಕರಾವಳಿ ಕಾವಲು ಪಡೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ಆರಂಭಿಸಿದ ಇವರು, 2019ರಿಂದ ಉಡುಪಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.