×
Ad

ಖೇಲೋ ಇಂಡಿಯಾ ಕ್ರೀಡಾಕೂಟ: ಮಂಗಳೂರು ವಿವಿ ದಕ್ಷಿಣ ಭಾರತದಲ್ಲಿ ಪ್ರಥಮ

Update: 2020-03-10 22:16 IST

ಮಂಗಳೂರು, ಮಾ.10: ಒರಿಸ್ಸಾದ ಬುಬೇಶ್ವರ್‌ನ ಕಳಿಂಗ ಇನ್‌ಸ್ಟ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನೋಲಜಿಯಲ್ಲಿ ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಯುನಿವರ್ಸಿಟಿ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯಿಂದ ಪುರಷರ 4 ಮತ್ತು ಮಹಿಳೆಯರ 5 ತಂಡಗಳು ಭಾಗವಹಿಸಿ 9 ಚಿನ್ನದ ಪದಕ, 7 ಬೆಳ್ಳಿಯ ಪದಕ ಹಾಗೂ 9 ಕಂಚಿನ ಪದಕ ಸಹಿತ 25 ಪದಕಗಳನ್ನು ಪಡೆದು 5ನೇ ಸ್ಥಾನವನ್ನು ತನ್ನ ಮುಡಿಗೇರಿಸಿತು. ಅಲ್ಲದೆ ದಕ್ಷಿಣ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯಿತು.

 ಈ ಕ್ರೀಡಾಕೂಟದಲ್ಲಿ ಪುರುಷರ ವಾಲಿಬಾಲ್ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ವೈಟ್‌ಲಿಫ್ಟಿಂಗ್‌ನಲ್ಲಿ 81 ಕೆ.ಜಿ. ವಿಭಾಗದಲ್ಲಿ ಶಿವಪ್ರಕಾಶ್ ಮತ್ತು 49 ಕೆ.ಜಿ ವಿಭಾಗದಲ್ಲಿ ಪ್ರಿಯದರ್ಶಿನಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ರಾಹುಲ್ ರಮೇಶ್ 61 ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ ಮತ್ತು +109 ಕೆ.ಜಿ. ವಿಭಾಗದಲ್ಲಿ ಕುಶಾಲ್ ಗೌಡ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ತೃತೀಯ ಸ್ಥಾನವನ್ನು ವಂದನಾ ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ಪುರುಷ ಮತ್ತು ಮಹಿಳೆಯರ ಪಂದ್ಯಾಟದಲ್ಲಿ 7 ಚಿನ್ನದ ಪದಕ, 6 ಬೆಳ್ಳಿಯ ಪದಕ, 5 ಕಂಚಿನ ಪದಕ ಪಡೆದು ಖೇಲೋ ಇಂಡಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.

ಈ ಕ್ರೀಡಾಕೂಟದಲ್ಲಿ ಮಹಿಳೆಯರ ಹಾಕಿ ಮತ್ತು ಕಬಡ್ಡಿ ತಂಡಗಳು ಭಾಗವಹಿಸಿತ್ತು. ಈ ತಂಡಗಳ ತರಬೇತುದಾರ ಮತ್ತು ವ್ಯವಸ್ಥಾಪಕರಾಗಿ ರಾಜ್ ಕಿಶೋರ್ ಭಂಡಾರಿ, ಸತೀಶ್ ನಾಯಕ್, ಪ್ರಮೋದ್ ಕುಮಾರ್, ರಾಜೇಂದ್ರ ಪ್ರಸಾದ್, ಅವಿನ್‌ಕುಮಾರ್, ಡಾ. ರಾಧಾಕೃಷ್ಣ ಎಚ್.ಬಿ., ಸಿದ್ದರಾಮಣ್ಣ ಕೆ.ಎಲ್, ನಾಚಪ್ಪ, ಸಾಯಿರಾ ಬಾನು, ಹಂಸಾವತಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News