ಮಣಿಪಾಲ ಆಸ್ಪತ್ರೆಗೆ ಶಂಕಿತ ಕೊರೋನ ವೈರಸ್ ಸೋಂಕಿತ ಮಹಿಳೆ ದಾಖಲು
ಉಡುಪಿ, ಮಾ.11: ಸಾಗರ ತಾಲೂಕು ಆನಂದಪುರಂನ 68 ವರ್ಷ ಪ್ರಾಯದ ಮಹಿಳೆಯೊಬ್ಬರು ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವಿಶೇಷ ವಾರ್ಡಿಗೆ ಬುಧವಾರ ಮಧ್ಯಾಹ್ನ ದಾಖಲಾಗಿದ್ದು, ರೋಗದ ಪತ್ತೆಗಾಗಿ ಅವರ ಗಂಟಲಿನ ದ್ರವವನ್ನು ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಈ ಮಹಿಳೆ ಫೆಬ್ರವರಿ ಕೊನೆಯ ವಾರದಲ್ಲಿ ಸೌದಿ ಅರೇಬಿಯಾದಕ್ಕೆ ತೆರಳಿದ್ದು, ಅಲ್ಲಿ ಜ್ವರ, ಉಸಿರಾಟದ ತೊಂದರೆ ಹಾಗೂ ಕೆಮ್ಮುವಿಗಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಗುಣಮುಖರಾದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಅವರು ವಿಮಾನ ನಿಲ್ದಾಣದಲ್ಲಿ ಕೊರೋನ ವೈರಸ್ ಸ್ಕ್ರೀನಿಂಗ್‌ಗೆ ಒಳಗಾಗಿದ್ದರು.
ಬೆಂಗಳೂರಿನಿಂದ ಮಹಿಳೆ ಶಿವಮೊಗ್ಹಕ್ಕೆ ಆಗಮಿಸಿದ್ದು, ಮತ್ತೆ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಹಿಳೆಯ ಕುಟುಂಬಿಕರು ಉಸಿರಾಟದ ತೊಂದರೆಗಾಗಿ ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದು, ಇಂದು ಮಧ್ಯಾಹ್ನ ಅವರನ್ನು ಇಲ್ಲಿನ ವಿಶೇಷ ವಾರ್ಡಿಗೆ ಸೇರಿಸಲಾಗಿತ್ತು.
ಇದೀಗ ಆಕೆಯ ಗಂಟಲಿನ ದ್ರವದ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಆಕೆಗೆ ತೀವ್ರ ನಿಗಾದಡಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಶಂಕಿತ ಕೊರೋನ ವೈರಸ್‌ಗಾಗಿ (ಕೋವಿಡ್-19) ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಏಕೈಕ ರೋಗಿ ಇವರಾಗಿದ್ದಾರೆ ಎಂದು ಡಿಎಚ್‌ಒ ಸ್ಪಷ್ಟ ಪಡಿಸಿದ್ದಾರೆ.