×
Ad

ದುಬೈಯಿಂದ ಬಂದ ಜ್ವರ ಬಾಧಿತನಲ್ಲಿ ಕೊವಿಡ್-19 ಸೋಂಕು ಇಲ್ಲ : ದ.ಕ. ಜಿಲ್ಲಾಧಿಕಾರಿ

Update: 2020-03-11 18:00 IST

ಮಂಗಳೂರು, ಮಾ.11: ಕಳೆದ ರವಿವಾರ ದುಬೈಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಸಿದ ಜ್ವರಬಾಧಿತ ಪ್ರಯಾಣಿಕನ ಗಂಟಲಿನ ದ್ರವದ ಮಾದರಿ ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಕೊವಿಡ್-19 ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಸ್ಪಷ್ಟನೆ ನೀಡಿದ ಅವರು, ದುಬೈನಿಂದ ಆಗಮಿಸಿದ್ದ ಪ್ರಯಾಣಿಕಲ್ಲಿ ಜ್ವರವಿದ್ದು, ಅವರು ಆರಂಭದಲ್ಲಿ ವೈದ್ಯರ ಸಲಹೆ ನಿರಾಕರಿಸಿದ್ದರು. ಅವರಿಗೆ ಮತ್ತು ಕುಟುಂಬದವರಿಗೆ ಸೂಕ್ತ ತಿಳುವಳಿಕೆ ನೀಡಿ ಅವರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ, ಮುಂಜಾಗೃತಾ ಕ್ರಮವಾಗಿ 14 ದಿನಗಳ ಕಾಲ ಮನೆಯಲ್ಲಿಯೇ ಇದ್ದು ಆರೋಗ್ಯವನ್ನು ಸುಧಾರಿಸಿಕೊಳ್ಳುವಂತೆ ತಿಳಿಸಲಾಗಿದೆ. ಅವರಿಂದ ಸಂಗ್ರಹಿಸಲಾದ ಗಂಟಲಿನ ದ್ರವದ ಪರೀಕ್ಷೆಯ ವರದಿ ಇಂದು ಸ್ವೀಕೃತವಾಗಿದೆ ಎಂದವರು ಹೇಳಿದರು.

ಕೊರೋನ ಭೀತಿ ಹಿನ್ನೆಲೆಯಲ್ಲಿ ಹಡಗು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರುವ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುತ್ತಿದೆ. ಎನ್‌ಎಂಪಿಟಿಯಲ್ಲಿ ವಿದೇಶದಿಂದ ಮಂಗಳೂರಿಗೆ ಆಗಮಿಸುತ್ತಿರುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತಿದೆ. ಆದರೆ ಅವರನ್ನು ಹಡಗಿನಿಂದ ಇಳಿದು ಹೊರ ಹೋಗಲು ನಿರ್ಬಂಧ ಹೇರಲಾಗಿದೆ. ವಿಮಾ ನಿಲ್ದಾಣದಲ್ಲಿ ಬಂದಿಳಿಯುವ ವಿದೇಶಿ ಪ್ರಯಾಣಿಕರಲ್ಲಿ ಜ್ವರ, ಶೀತ, ಕೆಮ್ಮು ಇತ್ಯಾದಿಗಳು ಕಂಡುಬಂದಲ್ಲಿ ಅವರನ್ನು ಅವರ ಮನೆಯಲ್ಲಿಯೇ 14 ದಿನಗಳ ಕಾಲ ವೈದ್ಯಕೀಯ ನಿಗಾ ವಹಿಸಲು ಸೂಚಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮಾತ್ರವೇ ಗಂಟಲಿನ ದ್ರವವನ್ನು ಪರೀಕ್ಷೆಗೆ ಸಂಗ್ರಹಿಸಲಾಗುತ್ತದೆ. 14 ದಿನಗಳಲ್ಲಿ ಜ್ವರ ಅಥವಾ ಶೀತ ಕೆಮ್ಮು ನೆಗಡಿಯಲ್ಲಿ ಸುಧಾರಣೆ ಕಂಡು ಬಾರದಿದ್ದಲ್ಲಿ ಆಸ್ಪತ್ರೆಯಲ್ಲಿ 28 ದಿನಗಳ ನಿಗಾದಲ್ಲಿ ಇರಿಸಬೇಕಾಗುತ್ತದೆ. ಈವರೆಗೂ 49 ಪ್ರಯಾಣಿಕರನ್ನು ಈ ರೀತಿ ನಿಗಾದಲ್ಲಿ ಇರಿಸಲು ಸೂಚಿಸಲಾಗಿದ್ದು, 5 ಮಂದಿ 28 ದಿನಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಇವರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿಲ್ಲ. 10 ಮಂದಿಯ ಗಂಟಲಿನ ದ್ರವದ ಮಾದರಿ ಸಂಗ್ರಹಿಸಲಾಗಿದ್ದು, (ದುಬೈ ಜ್ವರ ಬಾಧಿತ ಪ್ರಯಾಣಿಕ ಸೇರಿ) 7 ಮಂದಿಯ ವರದಿ ದೊರಕಿದ್ದು, ಯಾರಲ್ಲೂ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಎಂದು ಅವರು ವಿವರಿಸಿದರು.

ದ.ಕ. ಜಿಲ್ಲೆಯಲ್ಲಿ ಕಟ್ಟೆಚ್ಚರ

ಬೆಂಗಳೂರು ನಗರದಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದ್ದು, ಡಬ್ಲುಎಚ್‌ಒ, ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರ ನೀಡಿರುವ ನಿರ್ದೇಶನಗಳಂತೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯಕೀಯ ಕಾಲೇಜುಗಳು ಹಾಗೂ ಬಂದರು/ ವಿಮಾನ ನಿಲ್ದಾಣಗಳ ಅಧಿಕಾರಿಗಳು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ.

ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆ್ಯಂಬುಲೆನ್ಸ್ ನಿಲುಗಡೆ ಮಾಡಲಾಗಿದೆ. ವೆನ್‌ಲಾಕ್ ಸೇರಿ ನಗರದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್ ಆ್ಯಂಡ್ ರಿಸರ್ಚ್ ಸೆಂಟರ್, ಕೆಎಂಸಿ, ಕೆಎಸ್ ಹೆಗ್ಡೆ, ಎಜೆ, ಯೆನೆಪೋಯ, ಫಾದರ್ ಮುಲ್ಲರ್, ಇಎಸ್‌ಐ ಹಾಗೂ ಕಣಚೂರು ಆಸ್ಪತ್ರೆಗಳಲ್ಲಿ ಕೊರೋನಗೆ ಸಂಬಂಧಿಸಿ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿರಿಸಲಾಗಿದೆ. ವೆನ್‌ಲಾಕ್‌ನಲ್ಲಿ ಕೊರೋನ ಸಂಬಂಧಿ ಚಿಕಿತ್ಸೆಗೆ ಪ್ರತ್ಯೇಕ ಬ್ಲಾಕ್ ಮೀಸಲಾಗಿದ್ದು, ಮೂರು ಪುರುಷ ಹಾಗೂ ಮೂವರು ಮಹಿಳಾ ರೋಗಿಗಳಿಗೆ ಪ್ರತ್ಯೇಕ ಆರು ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್, ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಜಿಲ್ಲಾ ಸರ್ವೇಕ್ಷಣಾಧಿಾರಿ ನವೀನ್‌ಚಂದ್ರ ಉಪಸ್ಥಿತರಿದ್ದರು.

ಆತಂಕ ಬೇಡ

ಕೋವಿಡ್-19 ಸೋಂಕಿನ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಬದಲಾಗಿ ಸ್ವಯಂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ಕೊರೋನ ಭೀತಿಯಿಂದಾಗಿ ದಿನನಿತ್ಯ ವಿದೇಶದಿಂದ ಆಗಮಿಸುವವರ ಸಂಖ್ಯೆಯಲ್ಲಿ ಬದಲಾವಣೆ ಆದಂತೆ ಕಂಡು ಬರುತ್ತಿಲ್ಲ. ಆದರೆ ವಿದೇಶಕ್ಕೆ ಹೋಗಬೇಕಾದರೆ ಅಲ್ಲಿ ದೃಢೀಕೃತ ವೈದ್ಯಕೀಯ ಪತ್ರವನ್ನು ಕೇಳಲಾಗುತ್ತಿರುವುದರಿಂದ ವಿದೇಶಕ್ಕೆ ತೆರಳುತ್ತಿರುವವರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News