ಕೊರೊನವೈರಸ್ ಬಗ್ಗೆ ಪ್ರತೀದಿನ ಮಾಹಿತಿ ಪ್ರಸಾರ ಬೇಡ : ಐಎಂಎ ಆಗ್ರಹ
ಹೊಸದಿಲ್ಲಿ, ಮಾ.11: ದೇಶದಲ್ಲಿ ಕೊರೊನ ವೈರಸ್ ಪೀಡಿತರ ಸಂಖ್ಯೆಯ ಬಗ್ಗೆ ದಿನಾ ಮಾಹಿತಿ ಹಂಚಿಕೊಳ್ಳುವುದರಿಂದ ಜನರಲ್ಲಿ ಆತಂಕ, ಭೀತಿ ಮೂಡುತ್ತದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹೇಳಿದೆ. ಕೊರೊನಪೀಡಿತರ ಕುರಿತ ಮಾಹಿತಿಯನ್ನು ವರ್ಗೀಕರಿಸಿ ಚಿಕಿತ್ಸೆಗೆ ಸಂಬಂಧಿಸಿದ ನಿಖರತೆಯೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಐಎಂಎ ಸರಕಾರವನ್ನು ಆಗ್ರಹಿಸಿದೆ.
ಕೊರೊನವೈರಸ್ ಬಗ್ಗೆ ತಾಜಾ ಮಾಹಿತಿ , ಮುನ್ನೆಚ್ಚರಿಕಾ ಕ್ರಮಗಳನ್ನು ಪದೇಪದೇ ಪ್ರಸಾರ ಮಾಡುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹುಟ್ಟಬಹುದು. ಸಾಮಾನ್ಯ ಜನರಿಗೆ ಈ ರೋಗದ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲದ ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳು ಜನರಲ್ಲಿ ವಿಶ್ವಾಸ ಮತ್ತು ಭರವಸೆ ತುಂಬುವ ಪ್ರಯತ್ನ ಮಾಡಬೇಕಾಗಿದೆ. ಪ್ರತಿಯೊಬ್ಬ ವೈದ್ಯರೂ ತಮ್ಮ ಪ್ರದೇಶದಲ್ಲಿ ವಿಶ್ವಾಸಾರ್ಹ ಮಾಹಿತಿ ಮೂಲವಾಗಿ ಕಾರ್ಯ ನಿರ್ವಹಿಸಬೇಕು ಎಂದು ಐಎಂಎ ಮನವಿ ಮಾಡಿಕೊಂಡಿದೆ.
ವೇಗವಾಗಿ ಹರಡುತ್ತಿರುವ ಕೊರೊನ ವೈರಸ್‌ನಿಂದ ಉಂಟಾಗಿರುವ ಒತ್ತಡದ ಪರಿಸ್ಥಿತಿ ಯನ್ನು ನಿಭಾಯಿಸಿ, ರೋಗದ ನಿಯಂತ್ರಣದ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರೆ ನೀಡಿರುವ ಐಎಂಎ, ದೇಶದಾದ್ಯಂತದ ಐಎಂಎ ಶಾಖೆಗಳ ವೈದ್ಯರಿಗೆ ತಾಜಾ ಮಾಹಿತಿ ನೀಡುವ ಜೊತೆಗೆ ಸಾರ್ವಜನಿಕರಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹೆಲ್ಪ್‌ಲೈನ್ ಮೂಲಕ ದಿನವಿಡೀ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದೆ. ಜೊತೆಗೆ, ಕೊರೊನವೈರಸ್ ತಪಾಸಣೆಯ ಸಂದರ್ಭದಲ್ಲೇ ದೇಶದಾದ್ಯಂತ ಕ್ಷಯರೋಗದ ಪ್ರಕರಣಗಳನ್ನೂ ಗುರುತಿಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದೆ.