×
Ad

‘ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿ’ ಎಂಬ ಸಿಂದಿಯಾ ಹಳೆ ಟ್ವೀಟ್ ನೆನಪಿಸಿದ ಕಾಂಗ್ರೆಸ್!

Update: 2020-03-11 19:41 IST
ಫೈಲ್ ಚಿತ್ರ

ಹೊಸದಿಲ್ಲಿ, ಮಾ.11: “ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಲು ಬಿಜೆಪಿ ಉದ್ದೇಶಿಸಿದೆ. ಚುನಾವಣೆಯ ಮೂಲಕ ನೇರ ಗೆಲುವು ಪಡೆಯಲು ವಿಫಲವಾದಾಗ ಅವರು ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುತ್ತಾರೆ” ಎಂದು ಜ್ಯೋತಿರಾಧಿತ್ಯ ಸಿಂದಿಯಾ ಎಂಟು ತಿಂಗಳ ಹಿಂದೆಯಷ್ಟೇ ಹೇಳಿಕೆ ನೀಡಿದ್ದರು. ಈಗ ಬಿಜೆಪಿ ಸೇರ್ಪಡೆಗೊಂಡಿರುವ ಸಿಂಧಿಯಾರಿಗೆ ಕಾಂಗ್ರೆಸ್ ನಾಯಕರು ಈ ಹೇಳಿಕೆಯನ್ನು ನೆನಪಿಸಿದ್ದಾರೆ.

 ಬಿಜೆಪಿಯ ಕಟು ಟೀಕಾಕಾರನಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿಂಧಿಯಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ಮತ್ತು ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.

 2016ರಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಸಚೇತಕರಾಗಿದ್ದ ಸಿಂಧಿಯಾ, “ಬಿಜೆಪಿಯವರಿಗೆ ಸೋನಿಯಾ ಗಾಂಧಿಯನ್ನು ಕಂಡರೆ ಭಯವಿದೆ. ಸೋನಿಯಾ ಹೆಸರೆತ್ತಿದರೇ ಅವರಲ್ಲಿ ನಡುಕ ಆರಂಭವಾಗುತ್ತದೆ” ಎಂದಿದ್ದರು. ಬಿಜೆಪಿ ಸದಾಕಾಲ ದ್ವೇಷ ರಾಜಕಾರಣದ ಜಪ ಮಾಡುತ್ತಿದೆ ಎಂದು ಟೀಕಿಸಿದ್ದರು. ಸುಮಾರು ಎಂಟು ತಿಂಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಪತನದ ಅಂಚಿಗೆ ತಲುಪಿದ್ದಾಗ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಂಧಿಯಾ ‘ಪ್ರಜಾಪ್ರಭುತ್ವವನ್ನು ಹೇಗೆ ನಾಶ ಮಾಡುವುದು ಎಂಬ ಏಕೈಕ ಆಶಯ ಬಿಜೆಪಿಯವರಿಗಿದೆ. ಅರುಣಾಚಲ ಪ್ರದೇಶ, ಮಣಿಪುರ, ಗೋವಾದಲ್ಲಿ ಯಶಸ್ವಿಯಾದ ಬಳಿಕ ಈಗ ಕರ್ನಾಟಕದತ್ತ ಗಮನ ಹರಿಸಿದ್ದಾರೆ’ ಎಂದು ಟೀಕಿಸಿದ್ದರು.

ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರದ ಬಗ್ಗೆ ಫೆಬ್ರವರಿ 26ರಂದು ಟ್ವೀಟ್ ಮಾಡಿದ್ದ ಸಿಂಧಿಯಾ, ಬಿಜೆಪಿ ಮುಖಂಡರು ದ್ವೇಷ ರಾಜಕಾರಣ ಹರಡುವುದನ್ನು ಬಿಡಬೇಕು. ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ದಿಲ್ಲಿ ಸರಕಾರ ಮತ್ತು ಕೇಂದ್ರ ಸರಕಾರದ ಕರ್ತವ್ಯಲೋಪ ಕಾರಣ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News