×
Ad

ಸುಂದರ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣ ಅಡಿಪಾಯ: ಹರೇಕಳ ಹಾಜಬ್ಬ

Update: 2020-03-11 19:49 IST

ಮಂಗಳೂರು, ಮಾ.11: ಅನಕ್ಷರಸ್ಥನಾಗಿದ್ದ ವ್ಯಕ್ತಿಗೆ ಶಿಕ್ಷಣದ ಪ್ರಾಮುಖ್ಯತೆ ಅರಿವಿಗೆ ಬರಲು ದಶಕಗಳೇ ಕಳೆದಿದ್ದವು. ದಿಢೀರ್ ಸಂಭವಿಸಿದ ಸಣ್ಣ ಘಟನೆಯಿಂದ ಶಿಕ್ಷಣ ಹಸಿವು ಉಂಟಾಯಿತು. ಶಿಕ್ಷಣದಿಂದಲೇ ಸುಂದರವಾದ, ಸುಶಿಕ್ಷಿತ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ‘ಅಕ್ಷರ ಸಂತ’ ಎಂದೇ ಪ್ರಸಿದ್ಧರಾದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಪ್ರತಿಪಾದಿಸಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಸಂಜೆ ನಡೆದ ‘ಪದ್ಮಶ್ರೀ ಹರೇಕಳ ಹಾಜಬ್ಬ: ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕೌಶಿಕ್ ಶೆಟ್ಟಿ ಎಂಬವರು ಕೇಳಿದ ಪ್ರಶ್ನೆಗೆ ಹರೇಕಳ ಹಾಜಬ್ಬರು ದೃಢ ಮನಸ್ಸಿನಿಂದಲೇ ಉತ್ತರಿಸಿದರು.

ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣ ಪಡೆದಲ್ಲಿ ಜಗತ್ತಿನ ಯಾವುದೇ ಶಕ್ತಿಯಿಂದ ಮೋಸ ಹೋಗಲು ಸಾಧ್ಯವಿಲ್ಲ. ಶಿಕ್ಷಣದಿಂದ ಅಜ್ಞಾನವನ್ನು ಹೊಡೆದೋಡಿಸಬಹುದು. ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ. ಇದು ವ್ಯಕ್ತಿತ್ವ ರೂಪಿಸುವ ಜತೆಗೆ ಮತ್ತೊಬ್ಬರಿಗೆ ದಾರಿದೀಪವಾಗಲಿದೆ ಎನ್ನುವುದನ್ನು ಪುನರುಚ್ಚರಿಸಿದರು.

ಸರಕಾರಿ ಶಾಲೆ ಮುಚ್ಚಲ್ಪಡುತ್ತಿರುವ ಕುರಿತು ರೇಖಾ ಎಂಬವರು ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಾಜಬ್ಬರು, ಸರಕಾರಿ ಶಾಲೆಯಲ್ಲಿ ಉತ್ಕೃಷ್ಠ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ರಾಜ್ಯದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸುವ ಶಾಲೆಗಳ ಸಂಖ್ಯೆಯೂ ಅಧಿಕವಿದೆ. ಸರಕಾರಿ ಶಾಲೆಗಳನ್ನು ಕಡೆಗಣಿಸಬಾರದು. ಸರಕಾರವೂ ಸರಕಾರಿ ಶಾಲೆಗಳ ಬಗ್ಗೆ ಗಮನಹರಿಸುತ್ತಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಯೋಜನೆ, ಕಾರ್ಯಗಳು ನಡೆಯಬೇಕಿದೆ ಎಂದರು.

ಖಾಸಗಿ ಶಾಲೆಯಲ್ಲಿ ಹೆಚ್ಚಿನ ಸೌಲಭ್ಯಗಳು ಇದ್ದರೂ ಸರಕಾರಿ ಶಾಲೆಯ ಗಟ್ಟಿತನವೇ ಅತ್ಯಮೂಲ್ಯ. ಸರಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುವ ಜತೆಗೆ, ಅವರಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಬೇಕು ಎಂದು ಹಾಜಬ್ಬರು ಸಲಹೆ ನೀಡಿದರು.

‘ನನಗೆ ನೀವು ಸ್ಫೂರ್ತಿ, ನಿಮಗೆ ಯಾರು ಸ್ಫೂರ್ತಿ’ ಎಂದು ಅಭಿಶೇಷ್ ಎಂಬವರು ಸಂವಾದಲ್ಲಿ ಹಾಜಬ್ಬರತ್ತ ಪ್ರಶ್ನೆಯೊಂದನ್ನು ಹರಿಯಬಿಟ್ಟರು. ಇದಕ್ಕೆ ಹೃದಯಸ್ಪರ್ಶಿಯಾಗಿಯೇ ಉತ್ತರಿಸಿದ ಹಾಬಜ್ಜ, ನನಗೆ ಸ್ಫೂರ್ತಿದಾಯಕರು ಅಂತ ಯಾರೂ ಇಲ್ಲ. ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ಎದುರುರಾದ ಕೆಲ ಘಟನೆಗಳಿಂದಲೇ ರೋಸಿ ಹೋಗಿ ನನ್ನೂರಲ್ಲಿ ಶಾಲೆ ಆರಂಭಿಸಲು ತೀರ್ಮಾನಿಸಿದ್ದೆ. ಇದಕ್ಕೆ ಹಲವರ ಕೈ-ಕಾಲು ಬಿದ್ದಿದ್ದೆ. ಕೊನೆಗೂ ಯಶಸ್ವಿಯಾದೆ. ಶಾಲೆಯ ಅಭಿವೃದ್ಧಿಗಾಗಿ ಇಂದಿಗೂ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದರು.

ಸಂವಾದ ಕಾರ್ಯಕ್ರಮಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸ ದಿಗಂತ ದಿನಪತ್ರಿಕೆಯ ಹಿರಿಯ ವರದಿಗಾರ ಗುರುವಪ್ಪ ಬಾಳೆಪುಣಿ, ಅನಕ್ಷರಸ್ಥ ವ್ಯಕ್ತಿಯೊಬ್ಬರಿಗೆ ಅಕ್ಷರ ಸಂತ ಎನ್ನುವ ಬಿರುದು ಕೊಟ್ಟ ನಿದರ್ಶನವಿದ್ದರೆ ಅದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮಾತ್ರ ಎಂದು ಅಭಿಮಾನದಿಂದಲೇ ಹೇಳಿದರು.

ಹಾಜಬ್ಬರಲ್ಲಿನ ಸರಳತೆ ಎಂಥವರಿಗೂ ಇಷ್ಟವಾಗುತ್ತದೆ. ಸಾಮಾನ್ಯವಾಗಿ ಮುಗ್ಧತೆ ಎನ್ನುವ ಶ್ರೇಷ್ಠತೆ ಮಗುವಿನಲ್ಲಿ ಮಾತ್ರ ಗೋಚರಿಸುತ್ತದೆ. ಅಂತಹ ಮುಗ್ಧತೆಯನ್ನು ಹಾಜಬ್ಬರು ಎಂದಿಗೂ ಬಿಟ್ಟುಕೊಡದೇ ತಮ್ಮ ಜತೆಯೇ ಇಟ್ಟುಕೊಂಡಿದ್ದು, ಸಾಮಾನ್ಯರಲ್ಲೇ ಸಾಮಾನ್ಯನಾಗಿ ಸಾಧಕರಲ್ಲಿ ಮೇರುಸ್ಥಾನ ಪಡೆದ ವ್ಯಕ್ತಿ ಹಾಜಬ್ಬ ಎಂದು ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಡಾ.ಉದಯ ಕುಮಾರ್ ಮಾತನಾಡಿ, ಉತ್ತಮ ವ್ಯಕ್ತಿತ್ವದಿಂದ ಮಾದರಿಯಾಗು ವಂತಹ ಜೀವನ ರೂಪುಗೊಳ್ಳುತ್ತದೆ. ಹರೇಕಳ ಹಾಜಬ್ಬ ದೇವರ ವಿಶೇಷ ಸೃಷ್ಟಿ. ಒಳ್ಳೆಯ ವ್ಯಕ್ತಿತ್ವ ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನೆ ಏನು ಎಂದು ಹಲವರು ಆಲೋಚನೆ ಮಾಡುತ್ತಾ ಇರುತ್ತಾರೆ. ಅದಕ್ಕೆ ಹರೇಕಳ ಹಾಜಬ್ಬರು ಅತ್ಯುತ್ತಮ ನಿದರ್ಶನ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಕೃತಿಕಾ ನೇತೃತ್ವದ ತಂಡ ಪ್ರಾರ್ಥಿಸಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಉಪನ್ಯಾಸಕಿ ವಿಭಾ ಬಿ.ಜೆ. ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಬಸ್ ಮಾಲಕರ ಸಂಘದಿಂದ ಲಕ್ಷ ರೂ. ದೇಣಿಗೆ

ದ.ಕ. ಜಿಲ್ಲಾ ಬಸ್ ಮಾಲಕರು ಸಂಘದ ಪದಾಧಿಕಾರಿಗಳು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲದೆ, ಒಂದು ಲಕ್ಷ ರೂ. ಚೆಕ್‌ನ್ನು ದೇಣಿಗೆಯಾಗಿ ಸಮರ್ಪಿಸಲಾಯಿತು. ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಮಾಜಿ ಅಧ್ಯಕ್ಷ ಜಯರಾಮ್ ಮತ್ತು ಪದಾಧಿಕಾರಿಗಳು ಹಾಜಬ್ಬರನ್ನು ಗೌರವಿಸಿದರು.

‘ಚೆಕ್ ನನ್ನ ಹೆಸರಿಗೆ ಬೇಡ’: ಪದ್ಮಶ್ರೀ ಪ್ರಶಸ್ತಿ ಪಡೆದೆನೆಂದು ದ.ಕ. ಜಿಲ್ಲಾ ಬಸ್ ಮಾಲಕರ ಸಂಘದಿಂದ ನನ್ನ ಹೆಸರಿಗೆ ಒಂದು ಲಕ್ಷ ರೂ. ಚೆಕ್‌ನ್ನು ನೀಡಿದ್ದಾರೆ. ಈ ಚೆಕ್‌ನಲ್ಲಿ ನನ್ನ ಹೆಸರನ್ನು ನಮೂದಿಸಲಾಗಿದೆ. ಇದನ್ನು ಶಾಲೆಯ ಹೆಸರಲ್ಲಿ ತಿದ್ದುಪಡಿ ಮಾಡಿಕೊಡಬೇಕು ಎಂದು ಬಸ್ ಮಾಲಕರ ಸಂಘದ ಪದಾಧಿಕಾರಿಗಳಿಗೆ ವಿನಂತಿಸಿದರು.

‘ನಿಮ್ಮಿಷ್ಟದಂತೆಯೇ ತಿದ್ದುಪಡಿ ಮಾಡುತ್ತೇವೆ’ ಎಂದು ವೇದಿಕೆಯ ಎದುರು ಕುಳಿತಿದ್ದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಕೈಮುಗಿದು ನಗುಮುಖದಿಂದಲೇ ಒಪ್ಪಿಗೆ ಸೂಚಿಸಿದರು.

‘ಹಾಜಬ್ಬ ಮತ್ತೊಬ್ಬ ಗಾಂಧಿ’

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರು ರಾಷ್ಟ್ರಪಿತರಾದರು. ಅವರ ಹಾದಿಯಲ್ಲೇ ಕಿತ್ತಳೆ ಮಾರಿಕೊಂಡು ಶಾಲೆ ಕಟ್ಟಿಸಿದವರು ನಮ್ಮ ಹರೇಕಳ ಹಾಜಬ್ಬ. ನಿಷ್ಕಲ್ಮಶ ಹೃದಯದ ಹಾಜಬ್ಬರು ಮತ್ತೊಬ್ಬ ಗಾಂಧಿಯಾಗಿ ಉಳಿದುಕೊಂಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News