ಮಂಗಳೂರಿನಲ್ಲಿ ಹನಿಟ್ರ್ಯಾಪ್ ಪ್ರಕರಣ: 8 ಮಂದಿ ಆರೋಪಿಗಳಿಗೆ ಶಿಕ್ಷೆ
ಮಂಗಳೂರು, ಮಾ.11: ನಗರದ ಬಳ್ಳಾಲ್‌ಬಾಗ್‌ನ ಫ್ಲ್ಯಾಟ್‌ವೊಂದರಲ್ಲಿ ಬ್ಯಾಂಕ್ ಮ್ಯಾನೇಜರ್‌ವೊಬ್ಬರನ್ನು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡಿ ಹಣ ಲಪಟಾಯಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಇಬ್ಬರು ಯುವತಿಯರ ಸಹಿತ 8 ಮಂದಿಯ ಮೇಲಿದ್ದ ಆರೋಪವು ಮಂಗಳೂರಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗಳಿಗೆ 3 ವರ್ಷಗಳ ಕಠಿನ ಶಿಕ್ಷೆ ಮತ್ತು ತಲಾ 6,000 ರೂ. ದಂಡ ವಿಧಿಸಲಾಗಿದೆ.
ಕೊಣಾಜೆಯ ಶಿಲ್ಪಾ (27), ಎಲ್ಯಾರ್‌ಪದವಿನ ಅವಿನಾಶ್ (25), ಕುತ್ತಾರ್ ಪದವಿನ ಯತೀಶ್ (26) ಮತ್ತು ರಂಜಿತ್ (23), ದೇರಳಕಟ್ಟೆಯ ನಿತಿನ್ (23), ಕೊಣಾಜೆಯ ಶ್ರೀಜಿತ್ (24), ಬೋಂದೆಲ್‌ನ ಸಚಿನ್ (23), ಕೋಟೆಕಾರ್ ಬೀರಿಯ ತೃಪ್ತಿ (25) ಶಿಕ್ಷೆಗೊಳಗಾದ ಆರೋಪಿಗಳು.
ಪ್ರಕರಣದ ವಿವರ
2016ರ ಸೆ.18ರಂದು ಮಧ್ಯಾಹ್ನ ನಗರದ ಬಳ್ಳಾಲ್‌ಬಾಗ್‌ನ ಶ್ರೀದೇವಿ ಕಾಲೇಜು ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ 57ವರ್ಷ ಪ್ರಾಯದ ಬ್ಯಾಂಕ್ ಮ್ಯಾನೇಜರ್ (ಈಗ ನಿವೃತ್ತ) ಅವರಿಂದ ಬ್ಯಾಂಕಿಂಗ್ ಪರೀಕ್ಷೆಯ ತರಬೇತಿ ಪಡೆಯುವ ನೆಪದಲ್ಲಿ ಅವರನ್ನು ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚುವ ಬಗ್ಗೆ ಅದೇ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಆರೋಪಿ ಶಿಲ್ಪಾ ಸಂಚು ರೂಪಿಸಿದ್ದಳು.
ಅದರಂತೆ ಆರೋಪಿ ಶಿಲ್ಪಾಳನ್ನು ಬ್ಯಾಂಕ್ ಮ್ಯಾನೇಜರ್ ಬಳಿ ಕಳುಹಿಸಿ ಅವರ ಜತೆಗೆ ನಿಂತಿದ್ದ ಭಂಗಿಯ ಫೋಟೊ ಮತ್ತು ವೀಡಿಯೊ ಚಿತ್ರೀಕರಣ ಮಾಡಿ ಬಳಿಕ ಇತರ ಆರೋಪಿಗಳ ಜತೆ ಸೇರಿಕೊಂಡು ಫೋಟೊ ಮತ್ತು ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದಾಗಿ ಹೇಳಿ ಚೂರಿ ತೋರಿಸಿ ಬೆದರಿಕೆ ಹಾಕಿ 1 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 90,000 ರೂ. ನೀಡಲು ಬ್ಯಾಂಕ್ ಮ್ಯಾನೇಜರ್ ಒಪ್ಪಿಗೆ ಸೂಚಿಸಿದ್ದರು. ನಂತರ ಅವರ ಬ್ಯಾಂಕ್ ಚೆಕ್‌ನ ಎರಡು ಖಾಲಿ ಹಾಳೆಗಳಿಗೆ ಆರೋಪಿಗಳು ಬಲವಂತವಾಗಿ ಸಹಿ ಹಾಕಿಸಿ, ಪುತ್ರನ ದ್ವಿಚಕ್ರ ವಾಹನದ ಆರ್‌ಸಿ ಪಡೆದುಕೊಂಡು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಠಾಣೆಯ ಇನ್‌ಸ್ಪೆಕ್ಟರ್ ಕೆ. ರಾಜೇಶ್ ಪ್ರಕರಣ ದಾಖಲಿಸಿದ್ದರು. ಆರೋಪಿಗಳನ್ನು ಘಟನೆ ನಡೆದ 6 ದಿನಗಳ ಬಳಿಕ ಸೆ.24ರಂದು ಬರ್ಕೆ ಮತ್ತು ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಬಳಿಕ ಇನ್‌ಸ್ಪೆಕ್ಟರ್ ಕೆ.ಕೆ.ರಾಮಕೃಷ್ಣ ತನಿಖೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 4ನೇ ಜಿಲ್ಲಾ ಹೆಚ್ಜುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಮಲಿಂಗೇ ಗೌಡ 19 ಸಾಕ್ಷಿಗಳ ಪೈಕಿ 10 ಮಂದಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದಿಯಾವರ್ ವಾದ ಮಂಡಿಸಿದ್ದರು.
ಶಿಕ್ಷೆಯ ವಿವರ: ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಸಂಚು ರೂಪಿಸಿದ ಆರೋಪಕ್ಕೆ (ಐಪಿಸಿ 120ಬಿ) 3 ವರ್ಷ ಕಠಿನ ಸಜೆ ಮತ್ತು ತಲಾ 2,000 ರೂ. ದಂಡ, ದರೋಡೆ ಕೃತ್ಯದ ಆರೋಪಕ್ಕೆ (ಐಪಿಸಿ 395) 3 ವರ್ಷ ಕಠಿನ ಶಿಕ್ಷೆ ಮತ್ತು ತಲಾ 2,000 ರೂ. ದಂಡ, ಮನೆಗೆ ಅಕ್ರಮ ಪ್ರವೇಶ ಮಾಡಿದ ಆರೋಪಕ್ಕೆ (ಐಪಿಸಿ 448) ತಲಾ 1,000 ರೂ. ದಂಡ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ (ಐಪಿಸಿ 506) 6 ತಿಂಗಳ ಸಾದಾ ಸಜೆ ಮತ್ತು ತಲಾ 1,000 ರೂ. ದಂಡ ವಿಧಿಸಲಾಗಿದೆ.
ಹನಿಟ್ರ್ಯಾಪ್ ಘಟನೆಗಳ ಬಗ್ಗೆ ಮರ್ಯಾದೆಗೆ ಅಂಜಿ ದೂರು ನೀಡುವವರ ಸಂಖ್ಯೆ ಕಡಿಮೆ. ಈ ಪ್ರಕರಣದಲ್ಲಿ ಬ್ಯಾಂಕ್ ಮ್ಯಾನೇಜರ್ ಧೈರ್ಯ ದಿಂದ ದೂರು ಸಲ್ಲಿಸಿದ್ದರು. ಇದು ಹನಿಟ್ರ್ಯಾಪ್‌ಗೆ ಸಂಬಂಧಿಸಿ ಮಂಗಳೂರಿನ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಮೊದಲ ಪ್ರಕರಣವಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ತಿಳಿಸಿದ್ದಾರೆ.