ಕಾಲೇಜು ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರ: ಕಾಮತ್
ಮಂಗಳೂರು, ಮಾ.11: ನಗರದ ರಥಬೀದಿಯ ಡಾ ಪಿ. ದಯಾನಂದ ಪೈ, ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ‘ತೆಲಿಕೆ 2020’ ಕಿರು ಹಾಸ್ಯ ಪ್ರಹಸನ ಕಾರ್ಯಕ್ರಮವನ್ನು ಶಾಸಕ ಹಾಗೂ ಕಾಲೇಜು ಅಭಿವೃದ್ದಿ ಸಮಿತಿಯ ಅಧ್ಯಕ್ಷ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಿದಲ್ಲಿ ಜೀವನದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ. ವಿದ್ಯಾಭ್ಯಾಸ ಮುಗಿಸಿದ ನಂತರ ಸಮಾಜದಲ್ಲಿ ನೆಲೆ ಕಂಡುಕೊಂಡು ವಿದ್ಯೆ ನೀಡಿದ ಸಂಸ್ಥೆಯ ಸೇವೆ ಸಲ್ಲಿಸಬೇಕು ಎಂದರು.
ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅತಿಥಿಯಾಗಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ತಂಡದ ಕಿರು ಚಿತ್ರದ ‘ಝಲಕ್’ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ತುಳು ಚಲನಚಿತ್ರ ನಟ ತಿಮ್ಮಪ್ಪಕುಲಾಲ್, ನಿರೀಕ್ಷಾ ಶೆಟ್ಟಿ, ಝೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ಚಿತ್ರಾಲಿ, ಝೀ ಕನ್ನಡ ಕಾಮಿಡಿ ಕಿಲಾಡಿಯ ದಿವ್ಯಾ ಅಂಚನ್, ಯುವ ಗಾಯಕ ಅರ್ಫಾಝ್ ಉಳ್ಳಾಲ್, ಚಲನ ಚಿತ್ರ ನಟಿ ರೂಪಾ ವರ್ಕಾಡಿ, ಹಳೆ ವಿದ್ಯಾರ್ಥಿ ಸಂಘದ ಸಂಯೋಜಕ ಡಾ.ಶೇಷಪ್ಪಅಮೀನ್, ಸಂಘದ ಅಧ್ಯಕ್ಷ ಗುರುಪ್ರಸಾದ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಸಿ. ಸ್ವಾಗತಿಸಿದರು. ಲಾವಣ್ಯಾ ಹಾಗೂ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.