×
Ad

ಅಕ್ರಮ ಅಕ್ಕಿ ಮಾರಾಟ: 691 ಪ್ರಕರಣ ದಾಖಲು

Update: 2020-03-11 20:12 IST

ಮಂಗಳೂರು, ಮಾ.11: ರಾಜ್ಯದಲ್ಲಿ ಅಕ್ರಮ ಅಕ್ಕಿ ಮಾರಾಟಕ್ಕೆ ಸಂಬಂಧಿಸಿದಂತೆ 2013-14ರಿಂದ 2019-20ನೆ ಸಾಲಿನವರೆಗೆ 691 ಪ್ರಕರಣಗಳು ದಾಖಲಿಸಲಾಗಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖಾ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ವಿಧಾನ ಸಭೆಯ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ರಾಜ್ಯದಲ್ಲಿ ಅಕ್ರಮ ಅಕ್ಕಿ ಮಾರಾಟಕ್ಕೆ ಸಂಬಂಧಿ ಸಿದಂತೆ ಎಷ್ಟು ಪ್ರಕರಣಗಳು ದಾಖಲಾಗಿವೆ ? ಎಷ್ಟು ಪ್ರಮಾಣದ ಅಕ್ಕಿ ವಶಪಡಿಸಲಾಗಿದೆ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ 19,907 ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಅಕ್ರಮ ಅಕ್ಕಿ ಮಾರಾಟಕ್ಕೆ ಸಂಬಂಧಿಸಿದಂತೆ 2013-14ರಿಂದ 2019-20ನೆ ಸಾಲಿನವರೆಗೆ 691 ಪ್ರಕರಣಗಳು ದಾಖಲಾಗಿವೆ. 2018-19 ಮತ್ತು 2019-20ನೇ ಸಾಲಿನಲ್ಲಿ ಪಡಿತರ ದುರುಪಯೋಗ ಪ್ರಕರಣಗಳಿಗೆ ಸಂಬಂಧಿಸಿದಂತೆ 209 ಪ್ರಕರಣಗಳು ದಾಖಲಿಸಲಾಗಿದೆ. 41 ನ್ಯಾಯಬೆಲೆ ಅಂಗಡಿಗಳನ್ನು ರದ್ದುಗೊಳಿಸಲಾಗಿದೆ. 168 ಅಮಾನತುಪಡಿಸಿ ವಿಚಾರಣೆ ಜಾರಿಯಲ್ಲಿದೆ ಎಂದರು.

ಉಪ್ಪುನೀರು ಯೋಜನೆಗೆ ಹೂಡಿಕೆದಾರರಿಲ್ಲ: ಮನಪಾ ವ್ಯಾಪ್ತಿಯಲ್ಲಿ ಉಪ್ಪುನೀರನ್ನು ಶುದ್ಧೀಕರಿಸಿ ನೀರು ವಿತರಿಸಲು ಸರಕಾರ ಕೈಗೊಂಡ ಕ್ರಮಗಳೇನು ಎಂಬ ಐವನ್ ಡಿಸೋಜರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ದಿ ಸಚಿವ ಬಿ.ಎ. ಬಸವರಾಜ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು 100 ಎಂಎಲ್‌ಡಿ ಸಾಮರ್ಥ್ಯದ ಸಮುದ್ರ ನೀರು ಶುದ್ಧೀಕರಣ ಘಟಕ ನಿರ್ಮಿಸಲು ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರವು 2018ರಲ್ಲಿ 806 ಕೋ.ರೂ.ಗಳ ಯೋಜನೆಗೆ ಅನುಮೋದನೆ ನೀಡಿದೆ. ಆದರೆ ಹೂಡಿಕೆ ದಾರರು ಮುಂದೆ ಬಾರದ್ದರಿಂದ ಈ ಯೋಜನೆಯನ್ನು ಮುಂದುವರಿಸಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News