×
Ad

ಕಡಬ ತಾಲೂಕಿಗೆ ಎಣ್ಮೂರು ಗ್ರಾಮ ಸೇರ್ಪಡೆ: ಎಸ್‌ಡಿಪಿಐ ವಿರೋಧ

Update: 2020-03-11 20:13 IST

ಮಂಗಳೂರು, ಮಾ.11: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕಿಗೆ ಸುಳ್ಯ ತಾಲೂಕಿಗೊಳಪಟ್ಟ ಎಣ್ಮೂರು ಗ್ರಾಮವನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಎಸ್‌ಡಿಪಿಐ ಎಣ್ಮೂರು ಗ್ರಾಮ ಸಮಿತಿಯು ವಿರೋಧ ವ್ಯಕ್ತಪಡಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.

1994ರಲ್ಲಿ ಗ್ರಾಪಂ ಅಸ್ತಿತ್ವಕ್ಕೆ ಬಂದಾಗ ಮುರುಳ್ಯ, ಎಣ್ಮೂರು ಗ್ರಾಮಗಳನ್ನು ಒಗ್ಗೂಡಿಸಿ ಎಣ್ಮೂರನ್ನು ಕೇಂದ್ರ ಸ್ತಾನವನ್ನಾಗಿ ಮಾಡಿ ಹೊಸ ಗ್ರಾಪಂ ರಚನೆ ಮಾಡಲಾಗಿತ್ತು. ಆದರೆ ಸರಕಾರದ ನೂತನ ಆದೇಶದ ಪ್ರಕಾರ ಸದ್ಯ ಸುಳ್ಯ ತಾಲೂಕಿಗೆ ಒಳಪಟ್ಟಿರುವ ಎಣ್ಮೂರು ಗ್ರಾಮ ವನ್ನು ನೂತನವಾಗಿ ರಚನೆಗೊಂಡಿರುವ ಕಡಬ ತಾಲೂಕಿಗೆ ಸೇರ್ಪಡೆಗೊಳಿಸಲಾಗಿದೆ. ಮುರುಳ್ಯ ಗ್ರಾಮವನ್ನು ಸುಳ್ಯ ತಾಲ್ಲೂಕಿನಲ್ಲೇ ಉಳಿಸಿಕೊಳ್ಳಲಾಗಿದೆ.

ಈ ಎರಡು ಗ್ರಾಮಗಳು ಈ ಹಿಂದೆ ಎಣ್ಮೂರು ಗ್ರಾಪಂ ಮತ್ತು ಅಲ್ಲದೆ ಮಂಡಲ ಪಂಚಾಯತ್ ಕೂಡಾ ಆಗಿತ್ತು. 2011-12ರ ಜನಗಣತಿಯಂತೆ 1679ರಷ್ಟು ಜನಸಂಖ್ಯೆ ಹೊಂದಿರುವ ಮತ್ತು ಸುಸಜ್ಜಿತ ಕಟ್ಟಡವಿರುವ ಈ ಪಂಚಾಯತ್‌ನ ಸಮೀಪದಲ್ಲೇ ಕೆಎಸ್ ಗೌಡ ವಿದ್ಯಾಸಂಸ್ಥೆ, ಕೆನರಾ ಬ್ಯಾಂಕ್, ಸರಕಾರಿ ಹೈಸ್ಕೂಲ್, ಪ್ರಾಥಮಿಕ ಶಾಲೆ, ಪಶುಚಿಕಿತ್ಸಾ ಕೇಂದ್ರ, ಗ್ರಾಮಕರಣಿಕರ ಕಚೇರಿ, ಗ್ರಂಥಾಲಯ, ಪೆಟ್ರೋಲ್ ಬಂಕ್, ಐತಿಹಾಸಿಕ ಹಿನ್ನೆಲೆಯಿರುವ ಕೋಟಿಚೆನ್ನಯ್ಯರ ಬೈದರುಗಳ ಗರಡಿ ಕೂಡ ಇದೆ.

ಪಡ್ಪಿನಂಗಡಿ, ಕಲ್ಲೇರಿ,ಅಲೆಂಗಾರ,ಉಳ್ಳಲಾಡಿ,ಹೇಮಳ,ಸಮಹಾದಿ,ನರ್ಲಡ್ಕ,ಗುತ್ತಿಗೆ, ಕಟ್ಟ ಕಾಲನಿ,ನಿಂತಿಕಲ್,ಗುತ್ತು,ಗರಡಿ,ಅಲೆಕ್ಕಾಡಿ ಮುಂತಾದ ಊರುಗಳು ಎಣ್ಮೂರು ಕೇಂದ್ರಕ್ಕೆ ಹತ್ತಿರವಿದೆ.ಅಲೆಕ್ಕಾಡಿ, ಸಮಹಾದಿ,ಮುರುಳ್ಯವನ್ನು ಹೊರತುಪಡಿಸಿ ಇತರ ಎಲ್ಲಾ ಊರುಗಳನ್ನು ಎಡಮಂಗಲ ಗ್ರಾಮಕ್ಕೆ ಒಳಪಡಿಸಿರುವುದರಿಂದ ಇಲ್ಲಿನ ಜನ ಸಾಮಾನ್ಯರಿಗೆ ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಎಣ್ಮೂರು ಗ್ರಾಪಂನ್ನು ಎಡಮಂಗಳಕ್ಕೆ ವರ್ಗಾವಣೆ ಮಾಡಬಾರದು ಮತ್ತು ಕಡಬ ತಾಲೂಕಿಗೆ ಸೇರಿಸಬಾರದು ಎಂದು ಎಸ್‌ಡಿಪಿಐ ಅಧ್ಯಕ್ಷ ಹಮೀದ್ ಮರಕ್ಕಡ ನೇತೃತ್ವದ ತಂಡ ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News