×
Ad

ದಡ್ಡಲಕಾಡು ಸರಕಾರಿ ಶಾಲೆಗೆ ಆಂಗ್ಲಮಾಧ್ಯಮ ಪ್ರೌಢಶಾಲೆ ಮಂಜೂರು

Update: 2020-03-11 21:06 IST

ಬಂಟ್ವಾಳ, ಮಾ.11: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ದಡ್ಡಲಕಾಡು ಸರಕಾರಿ ಶಾಲೆಗೆ ಆಂಗ್ಲಮಾಧ್ಯಮ ಪ್ರೌಢಶಾಲೆಯನ್ನು ಮಂಜೂರು ಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಪ್ರೌಢಶಾಲೆಯನ್ನು ಮಂಜೂರುಗೊಳಿಸಲು ರಾತ್ರಿ ಹಗಲು ಶ್ರಮಿಸುತ್ತಿದ್ದ ಶಾಲಾ ದತ್ತು ಸಂಸ್ಥೆ ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ಬಹುದಿನದ ಕನಸು ನನಸಾಗಿದೆ. 

ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಎಂಟನೇವರೆಗೆ ಮಾತ್ರ ತರಗತಿಗಳಿದ್ದು ಪ್ರೌಢಶಾಲೆ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿತ್ತು. ಸಾಕಷ್ಟು ಮಕ್ಕಳ ಸಂಖ್ಯೆಯನ್ನು ಹೊಂದಿದ್ದರೂ ಕೂಡ ಪ್ರೌಢಶಾಲೆಯನ್ನು ಮಂಜೂರುಗೊಳಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ದಡ್ಡಲಕಾಡು ಶಾಲೆಗೆ ಭೇಟಿ ನೀಡಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಹಾಗೂ ಸರಕಾರಿ ಶಾಲೆ ಬೆಳೆದು ನಿಂತಿರುವ ರೀತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಶೀಘ್ರ ಪೌಢಶಾಲೆಯನ್ನು ಮಂಜೂರುಗೊಳಿಸುವುದಾಗಿ ಭರವಸೆ ನೀಡಿದ್ದರು. ಮಂಡ್ಯ ಜಿಲ್ಲೆಯ  ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಯಾವುದೇ ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಿಲ್ಲ. ಕಾಡಿನ ಮಧ್ಯೆ ಇರುವ ಈ ಶಾಲೆಯನ್ನು ಸ್ಥಳಾಂತರಿಸುವಂತೆ ಪ್ರಸ್ತಾವ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಈ ಶಾಲೆಯನ್ನು ಬಂಟ್ವಾಳ ತಾಲೂಕಿನ ದಡ್ಡಲಕಾಡುವಿಗೆ ಸ್ಥಳಾಂತರಿಸಿ, ಇದೇ ಶಾಲೆಯನ್ನು ಉನ್ನತೀಕರಿಸಿ ಆಂಗ್ಲ ಮಾಧ್ಯಮ ಸರಕಾರಿ ಪ್ರೌಢಶಾಲೆಯನ್ನಾಗಿ ಪ್ರಾರಂಭಿ ಸಲು ಸರಕಾರ ಆದೇಶ ಹೊರಡಿಸಿದೆ.  ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ನಿರಂತರ ಪರಿಶ್ರಮ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಸಹಕಾರದಿಂದಾಗಿ ಪ್ರೌಢಶಾಲೆ ದಡ್ಡಲಕಾಡುವಿಗೆ ಒಲಿದು ಬಂದಿದೆ.

ಹಬ್ಬದ ವಾತವರಣ

ಕಳೆದ ಮೂರು ವರ್ಷಗಳಿಂದ ಎಂಟನೇ ತರಗತಿಯನ್ನು ಮುಗಿಸಿದ ವಿದ್ಯಾರ್ಥಿಗಳು ಈ ಶಾಲೆಯನ್ನು ಬಿಟ್ಟು ಬೇರೆ ಶಾಲೆಗೆ ಹೋಗಲು ದುಃಖ ಪಡುತ್ತಿದ್ದರು. ಇಲ್ಲಿಯೇ ಪ್ರೌಢಶಾಲೆ ಇದ್ದರೆ ಒಳಿತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತಿದ್ದರು. ದಡ್ಡಲಕಾಡುವಿಗೆ ಪ್ರೌಢಶಾಲೆಯ ಮಂಜೂರುಗೊಳಿಸ ಬೇಕೆನ್ನುವ ಬೇಡಿಕೆಗೆ ವಿದ್ಯಾರ್ಥಿಗಳ ಪೋಷಕರೂ ಧ್ವನಿಗೂಡಿಸಿದ್ದರು. ಇದೀಗ ಬೇಡಿಕೆಯಂತೆ ಆಂಗ್ಲ ಮಾಧ್ಯಮ ಸರಕಾರಿ ಪ್ರೌಢಶಾಲೆ ಮಂಜೂರಾಗಿರುವುದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಅತೀವ ಸಂತಸವನ್ನು ಉಂಟು ಮಾಡಿದೆ. ಇತ್ತೀಚೆಗೆ ಶಾಸಕ ರಾಜೇಶ್ ನಾೈಕ್ ಅವರ ಒಡ್ಡೂರು ಫಾರ್ಮ್‍ನ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದ ಸಂದರ್ಭವೂ ಪ್ರೌಢಶಾಲೆ ಮಂಜೂರು ಗೊಳಿಸವಂತೆ ಪ್ರಕಾಶ್ ಅಂಚನ್ ಗಮನ ಸೆಳೆದಿದ್ದರು. ಅಲ್ಪಾವಧಿಯಲ್ಲಿಯೇ ಸಚಿವರು ಭರವಸೆಯನ್ನು ಈಡೇರಿಸಿದ್ದು ಗ್ರಾಮದಲ್ಲಿ ಹಬ್ಬದ ವಾತವರಣ ಸೃಷ್ಟಿಯಾಗಿದೆ.

ಮೂರು ವರ್ಷದ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ. ಶಿಕ್ಷಣ  ಸಚಿವ ಸುರೇಶ್ ಕುಮಾರ್ ಅವರು ನಮಗೆ ನೀಡಿದ್ದ ಭರವಸೆಯನ್ನು ಈಡೇರಿಸಿ ದ್ದಾರೆ. ಈ ಸಾಲಿನಲ್ಲಿ ಏಕೈಕ ಆಂಗ್ಲಮಾಧ್ಯಮ ಸರಕಾರಿ ಶಾಲೆ ದಡ್ಡಲಕಾಡುವಿಗೆ ಮಂಜೂರಾಗಿದೆ. ಇದು ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಲಹೆ, ಸಹಕಾರವೂ ಸ್ಮರಣೀಯ. 
- ಪ್ರಕಾಶ್ ಅಂಚನ್, ಅಧ್ಯಕ್ಷರು ಶ್ರೀದುರ್ಗಾ ಚಾರಿಟೆಬಲ್ ಟ್ರಸ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News