ಅಶ್ಲೀಲ ಸಂದೇಶ ರವಾನೆ ಆರೋಪ: ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು, ಮಾ.11: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಭಾವಚಿತ್ರದ ಜತೆಗೆ ಅಶ್ಲೀಲ ವೀಡಿಯೊವೊಂದನ್ನು ಪೋಸ್ಟ್ ಮಾಡಿ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪುತ್ತೂರಿನ ಖಾಸಗಿ ಕಾಲೇಜೊಂದರ ಸಿಬ್ಬಂದಿ ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ಇನ್‌ಸ್ಟಾ ಗ್ರಾಂ ಖಾತೆಗೆ ಅಪರಿಚಿತ ಇನ್‌ಸ್ಟಾ ಗ್ರಾಂ ಖಾತೆಯಿಂದ ಭಾವಚಿತ್ರ ಹಾಗೂ ಅದರೊಟ್ಟಿಗೆ ಬೇರೆಯೇ ಅಶ್ಲೀಲ ವೀಡಿಯೊ ಸ್ಕ್ರೀನ್‌ಶಾಟ್ ಹಾಕಿ ಇದು ನಿಮ್ಮದೇ ಎಂದು ಪರಿಶೀಲಿಸಿ ಹಾಗೂ ಭಾವಚಿತ್ರ ಮತ್ತು ಅಶ್ಲೀಲ ವೀಡಿಯೊ ವಾಟ್ಸಪ್ ಗ್ರೂಪ್‌ನಲ್ಲಿ ಹರಿದಾಡುತ್ತಿದೆ ಎಂದು ಮೆಸೇಜ್ ಕಳುಹಿಸಿದ್ದಾರೆ. ಅಶ್ಲೀಲ ವೀಡಿಯೊ ಪ್ಲೇ ಆಗದೆ ಅಸ್ಪಷ್ಟತೆ ಇರುವುದರಿಂದ ನನ್ನ ವಾಟ್ಸಪ್‌ಗೆ ವೀಡಿಯೋ ಕಳುಹಿಸಿಕೊಡುವಂತೆ ಹೇಳಿ ನನ್ನ ವಾಟ್ಸಪ್ ನಂಬರ್ ನೀಡಿದ್ದೇನೆ. ಬಳಿಕ ವಾಟ್ಸಪ್ ನಂಬರೊಂದರಿಂದ ನನ್ನ ವಾಟ್ಸಪ್‌ಗೆ ನನ್ನ ಭಾವಚಿತ್ರ ಹಾಗೂ ಅಶ್ಲೀಲ ವೀಡಿಯೋ ಕಳುಹಿಸಿದ್ದಾರೆ. ಇದನ್ನು ಪರಿಶೀಲಿಸಿದಾಗ ಆ ಭಾವಚಿತ್ರ ನನ್ನದೇ ಆಗಿದ್ದು ಅಶ್ಲೀಲ ವಿಡಿಯೋ ಬೇರೆ ಯಾರದ್ದೋ ಆಗಿರುತ್ತದೆ. ಭಾವಚಿತ್ರ ಮತ್ತು ವೀಡಿಯೊ ಕಳುಹಿಸಿದ ವ್ಯಕ್ತಿಗೆ ಕರೆ ಮಾಡಿ ವಾಟ್ಸಪ್ ಗ್ರೂಪ್‌ನ ಅಡ್ಮಿನ್ ಹಾಗೂ ಸದಸ್ಯರ ಬಗ್ಗೆ ವಿಚಾರಿಸಿದಾಗ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.