×
Ad

ಎನ್‌ಪಿಆರ್ ರದ್ದುಗೊಳಿಸಲು ಆಗ್ರಹ: ಉಡುಪಿಯಲ್ಲಿ ಉಪವಾಸ ಸತ್ಯಾಗ್ರಹ

Update: 2020-03-12 13:15 IST

ಉಡುಪಿ, ಮಾ.12: ವಿ ದ ಪೀಪಲ್ ಆಫ್ ಇಂಡಿಯಾ ಉಡುಪಿ ಇದರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಎನ್‌ಪಿಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಸಾಮೂಹಿಕ ಉಪವಾಸ ಸತ್ಯಾಗ್ರಹವನ್ನು ಗುರುವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಈ ಉಪವಾಸ ಸತ್ಯಾಗ್ರಹ ಸಂಜೆ ಆರು ಗಂಟೆಯವರೆಗೆ ಮುಂದುವರಿಯಲಿದೆ. ಸಂವಿಧಾನದ ಪೀಠಿಕೆ ವಾಚಿಸುವ ಮೂಲಕ ಹಿರಿಯ ಚಿಂತಕ ಜಿ.ರಾಜಶೇಖರ್ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂವರ್ತ್ ಸಾಹಿಲ್ ಆಝಾದಿ ಘೋಷಣೆಗಳನ್ನು ಕೂಗಿದರು.

ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ ಮಾತನಾಡಿ, ಈ ಹಿಂದಿನ ಸರಕಾರಗಳು ಈ ದೇಶದಲ್ಲಿ ಸುಶಿಕ್ಷತರ, ನಿರುದ್ಯೋಗ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಜನಗಣತಿಯನ್ನು ನಡೆಸುತ್ತಿತ್ತು. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಅದನ್ನು ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಅಂದರೆ 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯ ಬದಲು ಮೋದಿ ಸರಕಾರ 2020ರ ಎಪ್ರಿಲ್‌ನಲ್ಲಿ ನಡೆಸುವ ಮೂಲಕ ದೇಶದ ಖಜಾನೆಯನ್ನು ಲೂಟಿ ಮಾಡಲಿದೆ ಮತ್ತು ಇಡೀ ದೇಶವನ್ನು ಸಂಪೂರ್ಣ ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಗಾಂಧೀಜಿಯ ಅಹಿಂಸೆ, ಅಂಬೇಡ್ಕರ್‌ರ ಸಮಾನತೆ ಹಾಗೂ ವೌಲಾನ ಆಝಾದ್ ಅವರ ಏಕತೆಯ ಹೋರಾಟದಿಂದ ಬಲಿಷ್ಠ ಬ್ರಿಟಿಷರು ಈ ದೇಶವನ್ನೇ ತ್ಯಜಿಸಿ ಹೋದರು. ಅದೇ ಮಾದರಿಯ ಹೋರಾಟದ ಮೂಲಕ ಈ ಕರಾಳ ಕಾನೂನು ಜಾರಿಗೊಳಿಸುವವರನ್ನು ಸೋಲಿಸಲು ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ದಸಂಸ ಮುಖಂಡ ಸುಂದರ್ ಮಾಸ್ಟರ್, ತಾಪಂ ಮಾಜಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಜಮೀಲಾ ಹೂಡೆ ಮಾತನಾಡಿದರು.

ಸತ್ಯಾಗ್ರಹದಲ್ಲಿ ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ರೈ, ಹಿರಿಯ ಚಿಂತಕ ಪ್ರೊ.ಫಣಿರಾಜ್, ತಾಪಂ ಸದಸ್ಯೆ ಸುನೀತಾ ಶೆಟ್ಟಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಎಸ್‌ಡಿಪಿಐ ಮುಖಂಡ ಅಬ್ದುರ್ರಹ್ಮಾನ್ ಮಲ್ಪೆ, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಪಿ.ಮೊಯ್ದಿನಬ್ಬ, ಅಬ್ದುಲ್ ಅಝೀಝ್ ಉದ್ಯಾವರ, ಅಬೂಬಕರ್ ನೇಜಾರು, ಸಲಾವುದ್ದೀನ್, ಚಾರ್ಲ್ಸ್ ಆ್ಯಂಬ್ಲರ್, ಖತೀಬ್ ರಶೀದ್, ಮುಹಮ್ಮದ್ ವೌಲಾ, ನಝೀರ್ ಅಂಬಾಗಿಲು, ಪ್ರೊ.ಸಿರಿಲ್ ಮಥಾಯಸ್, ಗೀತಾ ವಾಗ್ಳೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News