ನೀವು ಗೋವುಗಳನ್ನು ರಕ್ಷಿಸಲು ಏನು ಬೇಕಾದರೂ ಮಾಡುತ್ತೀರಿ, ಜನರನ್ನಲ್ಲ: ಸರಕಾರಕ್ಕೆ ಸಿಬಲ್ ಚಾಟಿಯೇಟು

Update: 2020-03-12 14:23 GMT

ಹೊಸದಿಲ್ಲಿ: "ನೀವು ಗೋವುಗಳನ್ನು ರಕ್ಷಿಸಲು ಏನು ಬೇಕಾದರೂ ಮಾಡಬಲ್ಲಿರಿ ಆದರೆ ಮನುಷ್ಯರನ್ನಲ್ಲ'' ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಗುರುವಾರ ರಾಜ್ಯಸಭೆಯಲ್ಲಿ ದಿಲ್ಲಿ ಹಿಂಸಾಚಾರದ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಸಿಬಲ್,  ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಹಲವು ಬಿಜೆಪಿ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸದೇ ಇರುವುದಕ್ಕೆ  ಆಕ್ರೋಶ ವ್ಯಕ್ತಪಡಿಸಿದರು.

"ಎಫ್‍ಐಆರ್ ದಾಖಲಿಸಲು ಇದು ಸೂಕ್ತ ಸಮಯವಲ್ಲ ಎಂದು ನಿಮ್ಮ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ  ಹೇಳಿದ್ದಾರೆ. ಎಫ್‍ಐಆರ್ ದಾಖಲಿಸಲೂ ಸೂಕ್ತ ಸಮಯವಿದೆಯೇ ನನಗೆ ಕಾನೂನು ಕಲಿಸಿ'' ಎಂದು ಸಿಬಲ್ ವ್ಯಂಗ್ಯವಾಡಿದರು.

"ಕಾಶ್ಮೀರದಲ್ಲಿ ಬಂಧಿತರಾಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಿದರೆ ಜಮ್ಮು ಕಾಶ್ಮೀರದಲ್ಲಿ ಹಿಂಸೆ ತಾಂಡವವಾಡಬಹುದು ಎಂದು ಹೇಳುವ ಸರಕಾರ  ಜನರನ್ನು ಪ್ರಚೋದಿಸಿದ ತನ್ನದೇ ಪಕ್ಷದ ಸದಸ್ಯರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?'' ಎಂದು ಅವರು ಪ್ರಶ್ನಿಸಿದರು.

‘‘ಏನು ನಡೆಯಲಿದೆ ಎಂಬುದು ನಮಗೆ ಗೊತ್ತಿದೆ. ನೀವು ಅಮಾಯಕರನ್ನು ಶಿಕ್ಷಿಸುತ್ತೀರಿ. ತಪ್ಪೆಸಗಿದವರನ್ನು ರಕ್ಷಿಸುತ್ತೀರಿ. ಆರೋಪಿ ಯಾರೆಂದು ನಿಮಗೆ ಗೊತ್ತಿದ್ದರೂ ನೀವು ಎಫ್‌ಐಆರ್ ದಾಖಲಿಸಲಾರಿರಿ. ಅಂತಹದು ನಡೆಯಲು ಅವಕಾಶ ನೀಡಬೇಡಿ’’ ಎಂದು ಕಪಿಲ್ ಸಿಬಲ್ ಹೇಳಿದರು. ‘‘ನೀವು ಏನು ಹೇಳುತ್ತೀರಿ ಎಂದು ನಮಗೆ ಈಗಾಗಲೇ ಗೊತ್ತಿದೆ. ನೀವು ಇತಿಹಾಸಕ್ಕೆ ಮರುಳುತ್ತೀರಿ ಹಾಗೂ ಕಾಂಗ್ರೆಸ್ ಅದನ್ನು ಮಾಡಿತು, ಇದನ್ನು ಮಾಡಿತು ಎಂದು ಹೇಳುತ್ತೀರಿ. ಆದರೆ, ನೀವು ದಿಲ್ಲಿ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲಾರಿರಿ’’ ಎಂದು ಕಪಿಲ್ ಸಿಬಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News