ಕಮಿಷನರ್ ಹರ್ಷ ಸಹಿತ 49 ಪೊಲೀಸರಿಂದ ಸಾಕ್ಷ್ಯಾಧಾರ ಸಲ್ಲಿಕೆ
ಮಂಗಳೂರು, ಮಾ.12: ಕಳೆದ ವರ್ಷ (2019ರ ಡಿ.19) ನಡೆದ ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ. ಜಗದೀಶ್ ನಡೆಸಿದ ವಿಚಾರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸಹಿತ 49 ಪೊಲೀಸ್ ಸಿಬ್ಬಂದಿ ಸಾಕ್ಷಾಧಾರಗಳನ್ನು ಒದಗಿಸಿದರು.
ಮಂಗಳೂರು ಪೊಲೀಸ್ ಆಯುಕ್ತರು 21 ಪುಟಗಳ ಲಿಖಿತ ಹೇಳಿಕೆ ಸಹಿತ 936 ಪುಟಗಳ 38 ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದಾರೆ. ಪೊಲೀಸ್ ಆಯುಕ್ತರು ಲಿಖಿತ ಹೇಳಿಕೆಯ ವಿವರವನ್ನು ವಿಸ್ತೃತವಾಗಿ ಸಲ್ಲಿಸಿದ್ದಾರೆ. ಇಲ್ಲಿಗೆ ಕಮಿಷನರ್ ವಿಚಾರಣೆ ಪೂರ್ಣಗೊಂಡಿದೆ.
ಡಿಸಿಪಿ ಅರುಣಾಂಶಗಿರಿ ಇನ್ನಷ್ಟು ಸಾಕ್ಷ್ಯಾಧಾರ ಸಲ್ಲಿಸಲು ಸಮಯಾವಕಾಶ ಕೇಳಿದ್ದರು. ಮುಂದಿನ ವಿಚಾರಣೆಯಲ್ಲಿ ಡಿಸಿಪಿ ಅವರಿಗೆ ಅವಕಾಶ ನೀಡಲಾಗುವುದು ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯೂ ಆದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಆಯುಕ್ತರ ಪರ ನೋಡಲ್ ಅಧಿಕಾರಿಯಾದ ಕೆ.ಯು.ಬೆಳ್ಳಿಯಪ್ಪ ಅವರಿಂದ ‘ಹಿಸ್ಟೊಪ್ಯಾಥಾಲಜಿ ವರದಿ’, ‘ಎಫ್‌ಎಸ್‌ಎಲ್ ವರದಿ’, ‘ಸಾವಿನ ಅಂತಿಮ ಕಾರಣದ ವರದಿ’ ಸಲ್ಲಿಸಲು ಬಾಕಿಯಿದೆ. ‘ಮೃತರ ಆರಂಭಿಕ ಆರೋಗ್ಯ ವರದಿ’ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಎಲ್ಲ ವರದಿ ಸಲ್ಲಿಸಲು ಎಸಿಪಿಯವರು ಇನ್ನಷ್ಟು ಸಮಯಾವಕಾಶ ಕೇಳಿದ್ದಾರೆ ಎಂದು ಹೇಳಿದರು.
ಈಗ ಸಾಕ್ಷಾಧಾರ ಸಂಗ್ರಹ ಪ್ರಕ್ರಿಯೆ ನಡೆಸಿದೆ. ಇನ್ನು 57 ಜನರ ಸಾಕ್ಷಿ ವಿಚಾರಿಸುವ ಅಗತ್ಯವಿದ್ದು, ವಿಚಾರಣೆಯ ಸಮಯವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು. ಪ್ರಕರಣದ ಮೂರು ವರದಿಗಳು ಅತಿಮುಖ್ಯವಾಗಿದ್ದು, ಅವುಗಳಿಗಾಗಿ ಕಾಯುತ್ತಿದ್ದೇವೆ. ಅಲ್ಲದೆ, ದ.ಕ. ಜಿಲ್ಲಾಧಿಕಾರಿ, ಎಸಿ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಸಾಕ್ಷಿ ವಿಚಾರಣೆ ಇದೆ. ಬಳಿಕವೇ ಎರಡೂ ಕಡೆಯವರಿಗೆ ಪಾಟೀ ಸವಾಲ್‌ಗೆ ಅವಕಾಶ ನೀಡಲಾಗುವುದು. ಇದಾದ ನಂತರ ಎಲ್ಲ ವೀಡಿಯೊಗಳನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.
ವಿಚಾರಣೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು, ಮೂವರು ಗೃಹರಕ್ಷಕ ದಳ ಸಿಬ್ಬಂದಿ, ಸಿವಿಲ್ ಪೊಲೀಸ್, ಕೆಎಸ್‌ಆರ್‌ಪಿ, ಆರ್‌ಎಸ್‌ಐ, ಪಿಎಸ್‌ಐ, ಇನ್‌ಸ್ಪೆಕ್ಟರ್‌ಗಳು ಸಾಕ್ಷಾಧಾರ ನೀಡಿದ್ದಾರೆ. ಇಬ್ಬರು ನಾಗರಿಕರು ವಿಚಾರಣೆಗೆ ಹಾಜರಾಗಿದ್ದರು. ಘಟನೆಗೆ ಸಂಬಂಧಿಸಿದ ವೀಡಿಯೊಗಳನ್ನು ನೀಡಲು ಮುಂದಾದರು. ವೀಡಿಯೊವನ್ನು ಫಾರ್ಮ್ಯಾಟ್‌ನಲ್ಲಿ ಕೊಡಲು ಸೂಚಿಸಿದ್ದು, ಮುಂದಿನ ವಿಚಾರಣೆ ಸಮಯದಲ್ಲಿ ಹಾಜರುಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಮಾ.19ಕ್ಕೆ ವಿಚಾರಣೆ ಮುಂದೂಡಿಕೆ: ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾಗರಿಕರು ಹಾಗೂ ಪೊಲೀಸರ ಸಹಿತ 320 ಮಂದಿ ಸಾಕ್ಷಿಗಳು ಹಾಜರಾಗಿದ್ದಾರೆ. 176 ಪೊಲೀಸರ ಪೈಕಿ ಇನ್ನು 57 ಪೊಲೀಸ್ ಸಿಬ್ಬಂದಿಯ ಸಾಕ್ಷ ವಿಚಾರಣೆ ನಡೆಸುವುದು ಬಾಕಿ ಉಳಿದಿದೆ. ಇಂದು ನಡೆದ ವಿಚಾರಗೆ ಹಾಜರಾಗದವರು ಮಾ.19ರಂದು ದಾಖಲೆ, ಸಾಕ್ಷ್ಯಾಧಾರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಹೇಳಿದರು.