ಭಾರೀ ಗಾಳಿ ಮಳೆಗೆ ಶಾಮಿಯಾನ ನಾಶವಾದರೂ ಪ್ರತಿಭಟನೆ ಮುಂದುವರಿಸಿದ ಶಾಹೀನ್‌ಬಾಗ್ ಮಹಿಳೆಯರು

Update: 2020-03-12 14:29 GMT
ಫೈಲ್ ಚಿತ್ರ

ಹೊಸದಿಲ್ಲಿ, ಮಾ.12: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಕಾರ ಹಿಂಪಡೆಯುವವರೆಗೂ ಪ್ರತಿಭಟನೆ ಮುಂದುವರಿಸುವ ಸಂಕಲ್ಪ ತೊಟ್ಟಿರುವ ದಿಲ್ಲಿಯ ಶಾಹೀನ್‌ಬಾಗ್‌ನ ಮಹಿಳೆಯರು ದಿಲ್ಲಿಯಲ್ಲಿ ಕಳೆದ ಎರಡು ದಿನದಿಂದ ಸುರಿದ ಗಾಳಿ ಮಳೆಗೂ ಸೆಡ್ಡು ಹೊಡೆದು ನಿಂತಿದ್ದಾರೆ.

 ಶಾಹೀನ್‌ ಬಾಗ್ ‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ನೆರಳಿಗೆಂದು ಹಾಕಿರುವ ಟರ್ಪಾಲುಗಳು, ಧ್ವನಿವರ್ಧಕ ವ್ಯವಸ್ಥೆ ಎಲ್ಲವೂ ಬಿರುಗಾಳಿಯ ಆರ್ಭಟದಿಂದ ದಿಕ್ಕಾಪಾಲಾಗಿದೆ. ಆದರೆ 300ಕ್ಕೂ ಹೆಚ್ಚು ಮಹಿಳೆಯರು ಮಾತ್ರ ಯಾವುದಕ್ಕೂ ಧೃತಿಗೆಡದೆ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.

ಗಾಳಿಮಳೆಯಿಂದ ಛಿದ್ರವಾಗಿರುವ ಟೆಂಟ್‌ಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಸ್ಥಳೀಯರು ಹೇಳಿದ್ದಾರೆ. ನಿರಂತರ ಸುರಿದ ಮಳೆಯಿಂದ ಒದ್ದೆಯಾಗಿರುವ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಲು ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ 12ರಷ್ಟು ಚಾರ್ಪಾಯಿ(ಹುರಿ ಮಂಚ ಅಥವಾ ಹಗ್ಗದ ಮಂಚ)ಗಳನ್ನು ಪ್ರತಿಭಟನಾ ಸ್ಥಳಕ್ಕೆ ರವಾನಿಸಲಾಗಿದೆ.

 ವೃದ್ಧೆಯರು, ಹಿರಿಯರಿಗೆ ನೆಲದ ಮೇಲೆ ಕುಳಿತುಕೊಳ್ಳಲು ಕಷ್ಟವಾಗುತ್ತದೆ . ಆದ್ದರಿಂದ ಸ್ಥಳೀಯ ಬಡಗಿಗಳು ಅತ್ಯಂತ ಕನಿಷ್ಟ ದರ ವಿಧಿಸಿ ಈ ಚಾರ್ಪಾಯಿಗಳನ್ನು ಮಾಡಿಕೊಟ್ಟಿದ್ದಾರೆ ಎಂದು ಪ್ರತಿಭಟನೆಯಲ್ಲಿ ಆಯಾ ದಿನ ಭಾಷಣ ಮಾಡುವವರ ಪಟ್ಟಿಯನ್ನು ಸಿದ್ಧಪಡಿಸುವ ಜವಾಬ್ದಾರಿ ನಿರ್ವಹಿಸಿರುವ 22 ವರ್ಷದ ಸೈಮಾ ಹೇಳಿದ್ದಾರೆ.

ಗಾಳಿ , ಮಳೆಗೆ ಅಂಜಿದ ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಜಾಗ ಖಾಲಿ ಮಾಡಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸೈಮಾ, ಕೆಲವು ಸುದ್ದಿವಾಹಿನಿಗಳು ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡುತ್ತಿವೆ. ಮಳೆಯಿಂದ ನೆನೆದ ಮಹಿಳೆಯರು ಬಟ್ಟೆ ಬದಲಿಸಲು ಹೋದ ಕಾರಣ ಪ್ರತಿಭಟನಾ ಸ್ಥಳದಲ್ಲಿ ಕಡಿಮೆ ಮಹಿಳೆಯರಿದ್ದರು. ಇದನ್ನೇ ಅವರು ಚಿತ್ರೀಕರಿಸಿಕೊಂಡು ಪ್ರಸಾರ ಮಾಡಿದ್ದಾರೆ. ಮೂಳೆಯನ್ನೇ ಕೊರೆಯುವ ಚಳಿಯಲ್ಲೂ ನಾವು ಇಲ್ಲಿದ್ದೆವು, ನೆತ್ತಿಯನ್ನು ಸುಡುವ ಬೇಸಿಗೆಯಲ್ಲೂ ಇಲ್ಲೇ ಇದ್ದೆವು. ಮಳೆಯಲ್ಲೂ ಇರುತ್ತೇವೆ. ನಾವೆಲ್ಲೂ ಹೋಗುವವರಲ್ಲ ಎಂದು ಹೇಳಿದ್ದಾರೆ.

ಪ್ರತಿಭಟನಾಕಾರರಿಗೆ ಅಡುಗೆ ತಯಾರಿಸುವ ಸಮುದಾಯ ಅಡುಗೆ ಮನೆಯಲ್ಲಿ ಈಗಲೂ ಈ ಹಿಂದಿನ ಪ್ರಮಾಣದಲ್ಲೇ ಊಟ, ಉಪಾಹಾರ ಸಿದ್ಧವಾಗುತ್ತಿದೆ ಎಂದು ಅಡುಗೆ ಸಹಾಯಕ ಅಬ್ದುರ್ ರಹ್ಮಾನ್ ಹೇಳಿದ್ದಾರೆ. ಅಪರಾಹ್ನ 2 ಗಂಟೆ ಹಾಗೂ ರಾತ್ರಿ 10 ಗಂಟೆಗೆ ಇಲ್ಲಿ ಊಟ, ಉಪಾಹಾರ ಸಿದ್ಧವಾಗುತ್ತಿದೆ. ಈ ಹಿಂದಿನಂತೆಯೇ ದಾನಿಗಳು ಹಾಗೂ ಸ್ವಯಂ ಸೇವಕರು ಪಡಿತರ ಸಾಮಗ್ರಿ ಮತ್ತು ತರಕಾರಿ ಕೊಡುಗೆ ನೀಡುತ್ತಿದ್ದಾರೆ ಎಂದವರು ಹೇಳಿದ್ದಾರೆ.

ಈ ಮಧ್ಯೆ, ಶಾಹೀನ್‌ಬಾಗ್ ಪ್ರದೇಶದ ಅಂಗಡಿ ಮಾಲಕರ ಸಂಘದವರು ಈಶಾನ್ಯ ದಿಲ್ಲಿ ಪೊಲೀಸ್ ಉಪ ಆಯುಕ್ತ ಆರ್‌ಪಿ ಮೀನಾರನ್ನು ಭೇಟಿಯಾಗಿ, ಪ್ರತಿಭಟನೆ ನಡೆಯುತ್ತಿರುವ ರಸ್ತೆಯ ಒಂದು ಬದಿಯ ತಡೆಯನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿರುವುದರಿಂದ ತಮ್ಮ ವ್ಯಾಪಾರಕ್ಕೆ ತೊಂದರೆಯಾಗಿದ್ದು ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಸಂಘದವರು ಮನವಿ ಪತ್ರದಲ್ಲಿ ಹೇಳಿದ್ದಾರೆ. ಈ ಪ್ರಕರಣ ಈಗ ನ್ಯಾಯಾಲಯದಲ್ಲಿ ಇರುವುದರಿಂದ ಅಲ್ಲೇ ತೀರ್ಮಾನವಾಗಲಿದೆ ಎಂದು ಡಿಸಿಪಿ ಹೇಳಿದ್ದಾರೆ. ಇಲ್ಲಿರುವ ಅಂಗಡಿಗಳ ಬಾಡಿಗೆಯನ್ನು ಕನಿಷ್ಟ 6 ತಿಂಗಳು ಮನ್ನಾ ಮಾಡಲು ಸಿದ್ಧವಿರುವುದಾಗಿ ಪ್ರತಿಭಟನೆ ಆರಂಭವಾದ ಸಂದರ್ಭದಲ್ಲಿ ಕೆಲವು ಕಟ್ಟಡದ ಮಾಲಕರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News