ಎನ್ ಪಿಆರ್ ಗೆ ದಾಖಲೆಗಳು ಬೇಕಾಗಿಲ್ಲ, ಯಾರನ್ನೂ 'ಸಂಶಯಾಸ್ಪದ' ಎಂದು ಗುರುತಿಸಲ್ಲ: ಅಮಿತ್ ಶಾ

Update: 2020-03-12 17:02 GMT

ಹೊಸದಿಲ್ಲಿ: ಎನ್ ಪಿಆರ್ ಗಾಗಿ ಯಾವುದೇ ದಾಖಲೆಗಳನ್ನು ನೀಡಬೇಕಿಲ್ಲ ಮತ್ತು ಯಾರನ್ನೂ 'ಅನುಮಾನಾಸ್ಪದ' ಎಂದು ಗುರುತಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.

"ಯಾವುದೇ ದಾಖಲೆಗಳು ಎನ್ ಪಿಆರ್ ಗಾಗಿ ಬೇಕಾಗಿಲ್ಲ. ನಿಮಗೆ ಯಾವ ಮಾಹಿತಿ ತಿಳಿದಿದೆಯೋ ಅದನ್ನು ನೀಡಬಹುದು. ಉಳಿದದ್ದನ್ನು ಖಾಲಿ ಬಿಡಬಹುದು" ಎಂದು ರಾಜ್ಯ ಸಭೆಯಲ್ಲಿ ಮಾತನಾಡಿ ಅವರು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ನಾಯಕರು 'ಡಿ' ಅಥವಾ 'ಸಂಶಯಾಸ್ಪದ' ಎಂದು ಗುರುತಿಸಲಾಗುವುದೇ ಎಂದು ಕೇಳಿದ್ದು, "ಎನ್ ಪಿಆರ್ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಅಪ್ ಡೇಟ್ ವೇಳೆ ಯಾರನ್ನೂ ಸಂಶಯಾಸ್ಪದ ಎಂದು ಗುರುತಿಸಲಾಗುವುದಿಲ್ಲ"  ಎಂದು ಅಮಿತ್ ಶಾ ಹೇಳಿದರು.

ದಿಲ್ಲಿ ಹಿಂಸಾಚಾರದ ಹಿಂದಿರುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಆತ ಯಾವುದೇ ಧರ್ಮಕ್ಕೆ ಅಥವಾ ಪಕ್ಷಕ್ಕೆ ಸೇರಿರಲಿ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು. ದೊಂಬಿಯಲ್ಲಿ ತೊಡಗಿದ್ದವರನ್ನು ಶಿಕ್ಷಿಸುವ ಮೂಲಕ ನಾವು ಒಂದು ಉದಾಹರಣೆಯನ್ನು ರೂಪಿಸುತ್ತೇವೆ ಎಂದು ಶಾ ಹೇಳಿದ್ದಾರೆ. ಈ ಮಧ್ಯೆ, ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ದ್ವೇಷ ಭಾಷಣ ಮಾಡಿ ದಿಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದವರ ವಿರುದ್ಧ ಎಫ್‌ಐಆರ್ ಯಾಕೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಹಸುಗಳ ರಕ್ಷಣೆಗೆ ಏನು ಬೇಕಾದರೂ ಮಾಡುತ್ತೀರಿ, ಆದರೆ ಮನುಷ್ಯರ ರಕ್ಷಣೆಗೆ ಏನನ್ನೂ ಮಾಡುವುದಿಲ್ಲ. ಮನುಷ್ಯರ ರಕ್ಷಣೆ ಖಾತರಿಪಡಿಸುವ ಮತ್ತೊಂದು ಕಾನೂನನ್ನು ಜಾರಿಗೊಳಿಸಬೇಕೇ ಎಂದು ಸಿಬಲ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News