ಸ್ವಸ್ಥ ತಾಯಿ-ಮಗುವಿನಿಂದ ದೇಶ ಸದೃಢ: ನ್ಯಾ.ಕಾವೇರಿ
ಉಡುಪಿ, ಮಾ.12: ಸಾರ್ವಜನಿಕರ ಹಿತದೃಷ್ಟಿಯಿಂದ ಸರಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಜನನದ ಬಳಿಕ ತಾಯಿ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿ ಸದೃಢ ದೇಶವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಪೋಷಣ್ ಅಭಿಯಾನವನ್ನು ಆರಂಭಿಸಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾದ ಕಾರ್ಯದರ್ಶಿ ಕಾವೇರಿ ಹೇಳಿದ್ದಾರೆ.
ನಗರದ ಬ್ರಹ್ಮಗಿರಿಯಲ್ಲಿರುವ ಬಾಲಭವನದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ತಾಲೂಕುಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಾ.22ರವರೆಗೆ ನಡೆಯಲಿರುವ ಪೋಷಣ್ ಅಭಿಯಾನ- ಪೋಷಣ್ ಪಕ್ವಾಡಾ ಕಾರ್ಯಕ್ರಮದ ಅಂಗವಾಗಿ ಬಾಲಭವನ ಆವರಣದಿಂದ ಉಡುಪಿ ತಾಪಂ ಕಚೇರಿ ವರೆಗೆ ಪೋಷಣ್ ಪಕ್ವಾಡಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಗು ಹುಟ್ಟಿದ ಮೊದಲ ಸಾವಿರ ದಿನಗಳು ತಾಯಿ ಹಾಗೂ ಮಗುವಿಗೆ ಬಹಳ ಮುಖ್ಯವಾಗಿದ್ದು, ಈ ದಿನಗಳಲ್ಲಿ ತಾಯಿ ಹಾಗೂ ಮಗು ಹೆಚ್ಚಾಗಿ ಅಪೌಷ್ಟಿಕತೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.ಆರೋಗ್ಯವೇ ಬಾಗ್ಯ ಎನ್ನುವ ನುಡಿಗಟ್ಟನ್ನು ಅರ್ಥ ಪೂರ್ಣಗೊಳಿಸಲು ಕೇಂದ್ರ ಸರಕಾರ ಹದಿನೈದು ದಿನಗಳ ಪೋಷಣ್ ಅಭಿಯಾನ್- ಪೋಷಣ್ ಪಕ್ವಾಡಾ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಸ್ವಸ್ಥ ಭಾರತ ಕಟ್ಟುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಜನಿಸಿದ ಸಾವಿರ ದಿನಗಳೊಳಗಿನ ಮಗು ಹಾಗೂ ಮಗುವಿನ ತಾಯಿಯರ ಪಟ್ಟಿಯನ್ನು ತಯಾರಿಸಿ ಅವರ ಫೋಷಣೆಯತ್ತ ಗಮನ ಹರಿಸಬೇಕು. ಫೋಷಣ್ ಅಭಿಯಾನದ ಬಗ್ಗೆ ಸಂಪೂರ್ಣವಾಗಿ ತಿಳಿದು ಜನರಿಗೆ ಈ ಕುರಿತು ಮಾಹಿತಿ ನೀಡಿ ಸರಕಾರದ ಯೋಜನೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿ, ಫಲ ಪಡೆಯಲು ಗಿಡಕ್ಕೆ ನೀರು, ಗೊಬ್ಬರ ನೀಡಿ ಆರೈಕೆ ಮಾಡುವಂತೆ ಹುಟ್ಟಿದ ಮಗು ಹಾಗೂ ತಾಯಿಯ ಆರೈಕೆ ಬಹಳ ಮುಖ್ಯವಾದುದು. ಈ ಸಮಯ ದಲ್ಲಿ ಅಪೌಷ್ಟಿಕತೆ ಹಾಗೂ ರಾಸಾಯನಿಕಯುಕ್ತವಾದ ಆಹಾರದಿಂದ ತಾಯಿ ಹಾಗೂ ಮಗು ಮರಣ ಹೊಂದುವ ಪ್ರಮಾಣ ಹೆಚ್ಚಾಗಿರುತ್ತವೆ. ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ಪೌಷ್ಟಿಕಾಂಶಯುಕ್ತ ಹಾಗೂ ಸರಿಯಾದ ಆಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪೋಷಣ್ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದರು.
ಉಡುಪಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್‌ರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ವಚ್ಚತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿ ಪ್ರಭು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.