ಪೌರತ್ವ ತಿದ್ದುಪಡಿ ಕಾಯಿದೆಯ ಹಿಂದೆ ಒಳಸಂಚು: ಜಿ.ರಾಜಶೇಖರ್

Update: 2020-03-12 15:16 GMT

 ಉಡುಪಿ, ಮಾ.12: ಕರ್ನಾಟಕದಲ್ಲಿ ಎನ್‌ಪಿಆರ್ ರದ್ದುಗೊಳಿಸುವಂತೆ ಆಗ್ರಹಿಸಿ ವಿ ದ ಪೀಪಲ್ ಆಫ್ ಇಂಡಿಯಾ ಉಡುಪಿ ಇದರ ನೇತೃತ್ವದಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹವನ್ನು ಗುರುವಾರ ಬೆಳಗ್ಗೆಯಿಂದ ಸಂಜೆಯ ವರೆಗೆ ಉಡುಪಿ ಜಿಲ್ಲಾಧಿಕಾರಿ ಕೇರಿ ಎದುರು ಹಮ್ಮಿಕೊಳ್ಳಲಾಗಿತ್ತು.

ಸಂವಿಧಾನದ ಪೀಠಿಕೆ ವಾಚಿಸುವ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಿದ ಹಿರಿಯ ಚಿಂತಕ ಜಿ. ರಾಜಶೇಖರ್ ಮಾತನಾಡಿ, ದೆಹಲಿ ಹಿಂಸಾಚಾರದಲ್ಲಿ 52 ಭಾರತೀಯರು ಮೃತಪಟ್ಟಿದ್ದು, ಅವರನ್ನು ಹಿಂದು-ಮುಸ್ಲಿಮ್ ಎಂಬುದಾಗಿ ವಿಭಜನೆ ಮಾಡುವುದಿಲ್ಲ ಎಂದು ಲೋಕಸಭೆ ಯಲ್ಲಿ ಹೇಳಿಕೆ ನೀಡುವ ಮೂಲಕ ದೇಶದ ಗೃಹ ಸಚಿವರು, ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಯಾಕೆಂದರೆ ಇವರು ಮುಸ್ಲಿಮರನ್ನು ಈ ದೇಶದ ಜನಜೀವನದಿಂದ ಹೊರಗಿಡುವ ಒಳಸಂಚಿ ನಿಂದಲೇ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದಿದ್ದಾರೆ ಎಂದು ಟೀಕಿಸಿದರು.

ಸಹಬಾಳ್ವೆ ಸಂಘಟನೆಯ ಸಂಚಾಲಕ ಅಮೃತ್ ಶೆಣೈ ಮಾತನಾಡಿ, ಈ ಹಿಂದಿನ ಸರಕಾರಗಳು ಈ ದೇಶದಲ್ಲಿ ಸುಶಿಕ್ಷಿತರ, ನಿರುದ್ಯೋಗ ಹಾಗೂ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ಜನಗಣತಿಯನ್ನು ನಡೆಸುತ್ತಿತ್ತು. ಇದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಅದನ್ನು ಪ್ರತಿ 10ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಅದರಂತೆ ಈ ಬಾರಿ 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿ ಬದಲು ಮೋದಿ ಸರಕಾರ, ಇದೇ ವರ್ಷದ ಎಪ್ರಿಲ್‌ನಲ್ಲಿ ಎನ್‌ಪಿಆರ್ ನಡೆಸುವ ಮೂಲಕ ದೇಶದ ಖಜಾನೆಯನ್ನು ಲೂಟಿ ಮಾಡಲು ಮತ್ತು ಇಡೀ ದೇಶವನ್ನು ಸಂಪೂರ್ಣ ದಿವಾಳಿ ಯತ್ತ ಕೊಂಡೊಯ್ಯಲು ಮುಂದಾಗಿದೆ ಎಂದು ಆರೋಪಿಸಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಮಾತ ನಾಡಿ, ಗಾಂಧೀಜಿಯ ಅಹಿಂಸೆ, ಅಂಬೇಡ್ಕರ್‌ರ ಸಮಾನತೆ ಹಾಗೂ ವೌಲಾನ ಆಝಾದ್ ಅವರ ಏಕತೆಯ ಹೋರಾಟದಿಂದ ಬಲಿಷ್ಠ ಬ್ರಿಟೀಷರನ್ನೇ ಈ ದೇಶದಿಂದ ಓಡಿಸಲಾಗಿದೆ. ಅದೇ ಮಾದರಿಯ ಹೋರಾಟದ ಮೂಲಕ ಈ ಕರಾಳ ಕಾನೂನು ಜಾರಿಗೊಳಿಸುವವರನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಈ ಕರಾಳ ಕಾಯಿದೆಗಳ ಮೂಲಕ ಬಿಜೆಪಿ ಸರಕಾರ ಮುಸ್ಲಿಮರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರೆ, ಕ್ರಿಶ್ಚಿಯನ್ನರ ಬುಡಕ್ಕೆ ಕೊಡಲಿ ಏಟು ಹಾಕಲು ಹುನ್ನಾರ ಮಾಡುತ್ತಿದೆ. ಆದುದರಿಂದ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ನರು ಒಟ್ಟಾಗಿ ಈ ಅಪಾಯವನ್ನು ಎದುರಿಸಬೇಕು ಎಂದರು.

ಸಾಮಾಜಿಕ ಹೋರಾಟಗಾರ್ತಿ ಜಮೀಲಾ ಹೂಡೆ ಮಾತನಾಡಿ, ಚುನಾವಣೆಗೆ ಮೊದಲು ನೀಡಿದ ಭರವಸೆಗಳನ್ನು ಈಡೇರಿಸುವ ಬದಲು ಜನವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ, ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಇದರಿಂದಾಗಿ ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ಎಂಬ ಪ್ರಜಾಸತ್ತತೆಯ ಈ ಘೋಷಣೆ ಇಂದು ಹಾಸ್ಯಸ್ಪದ ವಾಗಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡ ಸುಂದರ್ ಮಾಸ್ಟರ್, ಮಾಜಿ ತಾಪಂ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಹಿರಿಯ ಚಿಂಕ ಪ್ರೊ.ಫಣಿರಾಜ್ ಮಾತನಾಡಿದರು.

ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಸ ಲಾಯಿತು. ಇದೇ ಸಂದರ್ಭದಲ್ಲಿ ಪೌರತ್ವ ಕಾಯಿದೆ ವಿರುದ್ಧದ ಹೋರಾಟದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂವರ್ತ್ ಸಾಹಿಲ್ ಆಝಾದಿ ಘೋಷಣೆಗಳನ್ನು ಕೂಗಿದರು.

ಸತ್ಯಾಗ್ರಹದಲ್ಲಿ ಸಿಐಟಿಯು ಮುಖಂಡ ವಿಶ್ವನಾಥ ರೈ, ತಾಪಂ ಸದಸ್ಯೆ ಸುನೀತಾ ಶೆಟ್ಟಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಎಸ್‌ಡಿಪಿಐ ಮುಖಂಡ ಅಬ್ದುರ್ರಹ್ಮಾನ್ ಮಲ್ಪೆ, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಪಿ. ಮೊದಿನಬ್ಬ, ಅಬ್ದುಲ್ ಅಝೀಝ್ ಉದ್ಯಾವರ, ಅಬೂಬಕ್ಕರ್ ನೇಜಾರು, ಸಲಾವುದ್ದೀನ್, ಚಾರ್ಲ್ಸ್ ಆ್ಯಂಬ್ಲರ್, ಖತೀಬ್ ರಶೀದ್, ಮುಹಮ್ಮದ್ ಮೌಲಾ, ನಝೀರ್ ಅಂಬಾಗಿಲು, ಪ್ರೊ.ಸಿರಿಲ್ ಮಥಾಯಸ್, ಗೀತಾ ವಾಗ್ಳೆ, ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.

‘ಈ ದೇಶದ ಶೇ.90ರಷ್ಟಿರುವ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದ ಜನರಲ್ಲಿ ಜನನ ಪ್ರಮಾಣಪತ್ರ, ಭೂಮಿ ದಾಖಲೆ ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ಅಂತಹವರನ್ನು ಚುನಾವಣೆಯಲ್ಲಿ ಮತದಾನದಿಂದ ವಂಚಿತರನ್ನಾಗಿಸಲಾಗುತ್ತದೆ. ಹೀಗಾಗಿ ಹಿಂದುತ್ವ ಮತಗಳನ್ನು ಕ್ರೋಢಿಕರಿಸುವ ಉದ್ದೇಶಕ್ಕಾಗಿ ಸಿಎಎಯಂತಹ ಕರಾಳ ಕಾನೂನುಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ’

-ಸುಂದರ್ ಮಾಸ್ಟರ್, ಮುಖಂಡರು, ದಲಿತ ಸಂಘರ್ಷ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News