ಚಿಲಿಂಬಿ: ಅಪಘಾತದಿಂದ ಟ್ರಾಫಿಕ್ ಜಾವ್
ಮಂಗಳೂರು, ಮಾ.12: ಹೆಲ್ಮೆಟ್ ಧರಿಸದ ವಿದ್ಯಾರ್ಥಿ ತನ್ನ ಸ್ನೇಹಿತನನ್ನು ಕುಳ್ಳಿರಿಸಿಕೊಂಡು ರಾಂಗ್ ಸೈಡ್‌ನಲ್ಲಿ ಬೈಕ್ ಚಲಾಯಿಸಿ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಘಟನೆ ನಗರದ ಚಿಲಿಂಬಿಯಲ್ಲಿ ಗುರುವಾರ ನಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಮೂವರು ಸಣ್ಣಪುಟ್ಟ ಗಾಯ ಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಚಿಲಿಂಬಿಯ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳಿದ್ದ ಬೈಕ್ ಏಕಾಏಕಿ ರಾಂಗ್ ಸೈಡ್‌ನಲ್ಲಿ ಚಲಾಯಿಸಿದಾಗ ಎದುರಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಇದರಿಂದ ಬೈಕ್‌ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸ್ಕೂಟರ್ ಸವಾರ ತಕ್ಷಣ ಬೈಕ್ ಸವಾರರನ್ನು ಉಪಚರಿಸಿ ದ್ದಾರೆ. ಈ ದೃಶ್ಯ ಸ್ಥಳೀಯ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಾಹನ ದಟ್ಟಣೆ: ಸಣ್ಣ ಮಟ್ಟಿನ ಅಪಘಾತ ನಡೆದಿದ್ದರೂ ಕೂಡ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಲ್ಲದೆ ಕಾನೂನು ಉಲ್ಲಂಘಿಸಿ ಅಪಘಾತಕ್ಕೆ ಕಾರಣರಾದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.