×
Ad

ಎ.1ರಿಂದ ಯೂನಿಯನ್ ಬ್ಯಾಂಕ್‌ನೊಂದಿಗೆ ಕಾರ್ಪೊರೇಶನ್ ಬ್ಯಾಂಕ್ ವಿಲೀನ

Update: 2020-03-12 22:11 IST

ಮಂಗಳೂರು, ಮಾ.12:ದೇಶದ ಆರ್ಥಿಕ ಕ್ಷೇತ್ರದ ಬಲವರ್ಧನೆಗಾಗಿ ಕಾರ್ಪೊರೇಶನ್ ಬ್ಯಾಂಕ್ 2020ರ ಎ.1ರಿಂದ ಯೂನಿಯನ್ ಬ್ಯಾಂಕ್ ಆ್ ಇಂಡಿಯಾ ಜತೆಗೆ ಅಧಿಕೃತವಾಗಿ ವಿಲೀನವಾಗಲಿದೆ ಎಂದು ಕಾರ್ಪೊರೇಷನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಓ ಪಿ.ವಿ. ಭಾರತಿ ಸ್ಪಷ್ಟಪಡಿಸಿದ್ದಾರೆ.

ನಗರದ ಫಾದರ್ ಮುಲ್ಲರ್ ಕನ್ವೆನ್‌ಶನ್ ಸೆಂಟರ್‌ನಲ್ಲಿ ಗುರುವಾರ ನಡೆದ ಕಾರ್ಪೊರೇಶನ್ ಬ್ಯಾಂಕ್‌ನ 115ನೇ ಸಂಸ್ಥಾಪನಾ ದಿನಾಚರಣೆ ಯಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರ ಭಾಷಣದ ವೀಡಿಯೋ ಮುದ್ರಿಕೆಯನ್ನು ಪ್ರದರ್ಶಿಸಲಾಯಿತು.

ಈ ವಿಲೀನದಿಂದ ಕಾರ್ಪೊರೇಶನ್ ಬ್ಯಾಂಕ್‌ನ ಗ್ರಾಹಕರಿಗೆ ಯಾವುದೇ ರೀತಿಯ ಸಮಸ್ಯೆಗಳಿರುವುದಿಲ್ಲ. ಬದಲಾಗಿ ಗ್ರಾಹಕರಿಗೆ ಇನ್ನಷ್ಟು ಬ್ಯಾಂಕಿಂಗ್ ಸೇವೆ ದೊರೆಯಲಿದೆ. ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸದೃಢವಾಗಬೇಕು ಎಂಬ ನೆಲೆಯಲ್ಲಿ ಕೇಂದ್ರ ಸರಕಾರ ವಿಲೀನ ಸೂತ್ರವನ್ನು ಜಾರಿಗೆ ತಂದಿದೆ. ಈ ಮೂಲಕ ದೇಶದಲ್ಲಿರುವ ಬ್ಯಾಂಕ್‌ಗಳು ವಿಶ್ವಮಟ್ಟದ ಸ್ಪರ್ಧೆಗೆ ಅಣಿಯಾಗಬೇಕು ಎಂಬುದು ಇದರ ಪರಿಕಲ್ಪನೆಯಾಗಿದೆ. ಈ ಮೂಲಕ ದೇಶದ ಆರ್ಥಿಕ ಶಕ್ತಿ ಬಲವರ್ಧನೆಯಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಪೊರೇಶನ್ ಬ್ಯಾಂಕ್ ಎ.1ರಿಂದಲೇ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಜತೆಗೆ ವಿಲೀನವಾಗಲಿದೆ ಎಂದು ಪಿವಿ ಭಾರತಿ ತಿಳಿಸಿದರು.

ಕಾರ್ಪೊರೇಶನ್ ಬ್ಯಾಂಕ್ ನಂಬಿಕೆ ಹಾಗೂ ವಿಶ್ವಾಸಾರ್ಹ ಬ್ಯಾಂಕ್ ಎಂಬ ಜನಮನ್ನಣೆ ಪಡೆದಿದೆ. ಖಾನ್ ಬಹದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಸಿಮ್ ಸಾಹೇಬ್ ಬಹದೂರ್ ಅವರ ಸಮರ್ಥ ನೇತೃತ್ವದಲ್ಲಿ ಆರಂಭವಾದ ಬ್ಯಾಂಕ್ ಇದೀಗ 115ನೇ ಸಂಸ್ಥಾಪಕರ ದಿನಾಚರಣೆಯ ಸಂಭ್ರಮ ಆಚರಿಸುತ್ತಿದೆ. ಕರಾವಳಿಯಲ್ಲಿ ಜನ್ಮತಾಳಿದ ಬ್ಯಾಂಕ್ ಪ್ರಸ್ತುತ ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ತನ್ನ ಶಾಖೆಗಳೊಂದಿಗೆ ಸಹ್ರಸಾರು ಗ್ರಾಹಕರನ್ನು ಹೊಂದಿದೆ. ಬ್ಯಾಂಕ್‌ನ ಹೆಸರು ಮಾತ್ರ ಮುಂದಿನ ದಿನಗಳಲ್ಲಿ ಬದಲಾಗಲಿದೆ. ಆದರೆ ಈಗ ಗ್ರಾಹಕರಿಗೆ ಯಾವೆಲ್ಲ ಸೌಲಭ್ಯ ಹಾಗೂ ಸೇವೆಗಳು ಸಿಗುತ್ತಿದೆಯೋ ಅವು ಮುಂದೆಯೂ ಸಿಗಲಿದೆ. ಕಾರ್ಪೊರೇಶನ್ ಬ್ಯಾಂಕ್ ನೇತೃತ್ವದ ಬ್ಯಾಂಕ್ ನಾಲ್ಕನೇ ಅತೀದೊಡ್ಡ ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಲಿದೆ ಎಂದರು.

 ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಡಿ ವಿವಿಧ ಸಂಸ್ಥೆಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಕಾರ್ಪೊರೇಶನ್ ಬ್ಯಾಂಕ್‌ನ ಮಹಾಪ್ರಬಂಧಕರಾದ ಗುರುಹರಿನಾಥನ್, ಎಸ್. ಕುಮಾರ್, ರಾಜೇಶ್ ಕುಮಾರ್ ವರ್ಮ ಉಪಸ್ಥಿತರಿದ್ದರು. ವಿ.ಲೀಲಾಧರ್, ಕೆ.ಆರ್. ಕಾಮತ್, ಡಾ.ಶಾಂತರಾಮ ಶೆಟ್ಟಿ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸಭಾಕಾರ್ಯಕ್ರಮದ ಬಳಿಕ ಖ್ಯಾತ ಗಾಯಕ ಅಜಯ್ ವಾರಿಯರ್ ಅವರಿಂದ ಸಂಗೀತ ಸಂಜೆ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News