×
Ad

ಕೊರೊನ ವೈರಸ್ ಹಿನ್ನಲೆ: ದ.ಕ.ಜಿಲ್ಲೆಯಲ್ಲಿ 614 ಮಂದಿಯ ತಪಾಸಣೆ

Update: 2020-03-12 22:14 IST

ಮಂಗಳೂರು, ಮಾ.12: ಕೊರೊನ ವೈರಸ್ ಹಿನ್ನಲೆಯಲ್ಲಿ ಅದು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎನ್‌ಎಂಪಿಟಿಯಲ್ಲಿ ಗುರುವಾರ 614 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ.

ಮೊನ್ನೆಯಿಂದ ತಪಾಸಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ವೇಳೆ ಜ್ವರ, ಶೀತ, ಕೆಮ್ಮು, ತಲೆನೋವಿನಂತಹ ಲಕ್ಷಣ ಕಂಡು ಬಂದವರನ್ನು 14 ದಿನಗಳ ಕಾಲ ವಿಶೇಷ ನಿಗಾದಲ್ಲಿರಿಸಲಾಗುತ್ತದೆ. ಈಗಾಗಲೇ 50 ಮಂದಿಯನ್ನು ವೈದ್ಯಕೀಯ ನಿಗಾದಲ್ಲಿರಿಸಲಾಗಿದೆ. ಆ ಪೈಕಿ 11 ಮಂದಿಯಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. 5 ಮಂದಿಯ ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗಿದೆ. ಮೂರು ವರದಿ ಈಗಾಗಲೇ ಸ್ವೀಕೃತವಾಗಿದ್ದು, ಕೋವಿಡ್-19 ಸೋಂಕು ಪತ್ತೆಯಾಗಿಲ್ಲ. ಉಳಿದ ಎರಡು ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ದ.ಕ. ಜಿಲ್ಲೆಯ ಎಲ್ಲ ಖಾಸಗಿ ವೈದ್ಯರು ತಮ್ಮ ಚಿಕಿತ್ಸಾಲಯಗಳಿಗೆ ಬರುವ ರೋಗಿಯ ಪ್ರಯಾಣದ ವಿವರಗಳನ್ನು ಪಡೆದು ಮತ್ತು ಸೋಂಕಿರುವ ಪ್ರದೇಶದಿಂದ ಬರುವ ರೋಗಿಯ ಆರೋಗ್ಯ ವಿವರಗಳನ್ನು ಕಡ್ಡಾಯವಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ವರದಿ ಮಾಡಲು ಸೂಚಿಸಲಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳನ್ನು ಗುರುತಿಸಿ ಆರೋಗ್ಯ ತಪಾಸಣೆ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಂತದಲ್ಲಿ ವಿವಿಧ ತಂಡಗಳನ್ನು ರಚನೆ ಮಾಡಲಾಗಿದೆ. ಲಕ್ಷದ್ವೀಪದಿಂದ ಹಡಗಿನಲ್ಲಿ ಮಂಗಳೂರಿಗೆ ಬರುವ ಸ್ಥಳೀಯ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.

ಯಾವುದೇ ರೀತಿಯ ಜ್ವರ, ಶೀತ, ಕೆಮ್ಮು ಇರುವ ವ್ಯಕ್ತಿಗಳನ್ನು ಸಂಪೂರ್ಣ ಗುಣಮುಖರಾಗುವವರೆಗೆ ಜನಸಂದಣಿ ಇರುವ ಜಾಗಗಳಿಗೆ ಹೋಗದಿರಲು ಡಿಸಿ ಮನವಿ ಮಾಡಿದ್ದಾರೆ.

ರೈಲು ನಿಲ್ದಾಣ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಗುರುವಾರ ಡಿವಿಜನಲ್ ರೈಲ್ವೆ ಮ್ಯಾನೇಜರ್ ಪ್ರತಾಪ್ ಸಿಂಗ್ ಶಮಿ ನೇತೃತ್ವ ದಲ್ಲಿ ಕೊರೊನ ವೈರಸ್ ಕುರಿತು ಜಾಗೃತಿ ಸಭೆ ನಡೆಯಿತು. ಈ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ರೈಲು ನಿಲ್ದಾಣದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗಕ್ಕೆ ನಿರ್ದೇಶನ ನೀಡಲಾಯಿತು.

ಸಭೆಯಲ್ಲಿ ರೈಲ್ವೆ ಅಧಿಕಾರಿಗಳಾದ ಸಿ. ಮುರಳೀಧರನ್, ರಾಕೇಶ್ ಕುಮಾರ್ ಮೀನಾ, ಶಿವಶಂಕರ್ ಮೂರ್ತಿ, ಕೆವಿ ಶ್ರೀಧರನ್, ರಾಮ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News