ಕೊಂಡೋದ ಕಸದೊಂದಿಗೆ ವಾಪಸ್ ಬಂದ ಬಂಟ್ವಾಳ ಪುರಸಭಾ ಅಧಿಕಾರಿಗಳು

Update: 2020-03-12 16:57 GMT

ಬಂಟ್ವಾಳ, ಮಾ.12: ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬಂಟ್ವಾಳ ಪುರಸಭೆಯಿಂದ ಲಾರಿಯಲ್ಲಿ ತ್ಯಾಜ್ಯ ಸಾಗಿಸಿದ್ದು ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಸ್ಥಳೀಯರು ತ್ಯಾಜ ತುಂಬಿದ ಲಾರಿ ಸಹಿತ ಪುರಸಭಾ ಅಧಿಕಾರಿ ಗಳನ್ನು  ವಾಪಾಸ್ ಕಳುಹಿಸಿದ ಘಟನೆ ನಡೆದಿದೆ.

ಪುರಸಭಾ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗಾಗಿ ಸಜೀಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿ 2006ರಲ್ಲಿ 9 ಎಕರೆ  ಜಮೀನು ಕಾದಿರಿಸಿ ಕೆಲವು ಕಾಮಗಾರಿಗಳನ್ನು ನಡೆಸಲಾಗಿತ್ತು. ಆದರೆ ಈ ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತ ಹಲವಾರು ಮನೆಗಳು, ಸರಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿರುವ ಕಾರಣ ಇಲ್ಲಿ ಕಸ ವಿಲೇವಾರಿ ಮಾಡಬಾರದು. ಮಾಡುವುದಾದರೆ ಎಲ್ಲಾ ಮನೆಗಳು, ಶಾಲೆ, ಅಂಗನವಾಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾ ಬಂದಿದ್ದಾರೆ. 

ಇತ್ತೀಚಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬಿ.ಸಿ.ರೋಡಿನ ತಾಪಂನ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆದ ವಿವಿಧ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಅವರಲ್ಲಿ ಈ ಘಟಕದ ಬಗ್ಗೆ ವಿಚಾರಿಸಿದಾಗ, ಒಂದು ತಿಂಗಳೊಳಗೆ ಘಟಕದಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ತ್ಯಾಜ್ಯ ವನ್ನು ವಿಲೇವಾರಿ ಮಾಡಲು ಹೋದ ವೇಳೆ ಸ್ಥಳೀಯ ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಜೀಪ ಅವರ ನೇತೃತ್ವದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಲಾರಿಯಲ್ಲಿ ಕೊಂಡುಹೋದ ಕಸವನ್ನು ಖಾಲಿ ಮಾಡಲು ಬಿಡದ ಹಿನ್ಮೆಲೆಯಲ್ಲಿ ಅಧಿಕಾರಿಗಳು ಕಸ ತುಂಬಿದ ಲಾರಿಯೊಂದಿಗೆ ಅಲ್ಲಿಂದ ವಾಪಸ್ ಬಂದಿದ್ದಾರೆ.

ಸಜೀಪ ನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ಘನ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸ್ಥಳೀಯ ಗ್ರಾಪಂ ಹಾಗೂ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದುಕೊಂಡಿಲ್ಲ. ಗ್ರಾಪಂ ಜೊತೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿದ ಬಳಿಕ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಅದು ಬಿಟ್ಟು ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಕಸ ತಂದು ಹಾಕಲು ಹೊರಟಿರುವ ಪುರಸಭಾ ಇಲಾಖೆಯ ನೀತಿಗೆ ನಮ್ಮ ವಿರೋಧವಿದೆ. ಬೇಡಿಕೆ ಈಡೇರಿಸುವವರೆಗೆ ಇಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಬಲ ಪ್ರಯೋಗಕ್ಕೆ ಮುಂದಾದರೆ 2006ರ ಮಾದರಿಯಲ್ಲಿ ತೀವ್ರ ಹೋರಾಟ ನಡೆಸಲಾಗುವುದು.

- ಮುಹಮ್ಮದ್ ನಾಸಿರ್, ಸಜಿಪ ನಡು ಗ್ರಾಪಂ ಅಧ್ಯಕ್ಷ 

ಕಸವಿಲೇವಾರಿಗೆ ಸಂಕಷ್ಟ 

ಬಂಟ್ವಾಳ ಪುರಸಭಾ ವ್ಯಾಪ್ತಿಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಜಾಗದ ಕೊರತೆ ಇರುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹಲವಾರು ವರ್ಷಗಳಿಂದ ತ್ಯಾಜ್ಯವನ್ನು ಸಾಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಯೂ ಸಮಸ್ಯೆ ಉದ್ಬವಾದ್ದರಿಂದ ಬಂಟ್ವಾಳದ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದೇ ಪುರಸಭೆಗೆ ದೊಡ್ಡ ಸವಾಲು ಆಗಿದೆ.
ಹಾಗಾಗಿ ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕಸವನ್ನು ಸಾಗಿಸಲಾಗಿತ್ತು. ಆದರೆ ಅಲ್ಲಿನ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸಲು ಪುರಸಭೆ ವಿಫಲವಾಗಿದ್ದು ಹೀಗಾಗಿ ಪುರಸಭೆ ಕೊಂಡು ಹೋದ ಕಸವನ್ನು ವಾಪಸ್ ತರುವಂತೆ ಆಗಿದೆ.

ರಕ್ಷಣೆಗೆ ಪೊಲೀಸರಿಗೆ ಮನವಿ ?

ಸಜೀಪ ನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವು ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತ್ಯಾಜ್ಯ ಕೊಂಡು ಹೋದ ವೇಳೆ ಅಲ್ಲಿನ ಗ್ರಾಪಂ ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಸ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ರಕ್ಷಣೆ ನೀಡುವಂತೆ ಪುರಸಭೆಯ ಅಧಿಕಾರಿಗಳು ಗ್ರಾಮಾಂತರ ಠಾಣಾ ಪೊಲೀಸರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಪೊಲೀಸರಾಗಲಿ, ಅಧಿಕಾರಿಗಳಾಗಲಿ ದೃಡಪಡಿಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News