‘ಇದ್ದಕ್ಕಿದ್ದಂತೆ ನಡೆದ ಗಲಭೆ’ ಈಗ ‘ಪಿತೂರಿ’ ಆದದ್ದು ಹೇಗೆ?

Update: 2020-03-12 18:18 GMT

ಹೊಸದಿಲ್ಲಿ, ಮಾ. 12: ದಿಲ್ಲಿ ಗಲಭೆ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆದ ದಿನದ ಬಳಿಕ ರಾಜ್ಯಸಭೆಯಲ್ಲಿ ಗುರುವಾರ ಪ್ರತಿಕ್ರಿಯೆ ನೀಡಲು ವಿಳಂಬ ಮಾಡಿದ ನರೇಂದ್ರ ಮೋದಿ ಸರಕಾರವನ್ನು ಪ್ರತಿಪಕ್ಷದ ಹಲವು ನಾಯಕರು ಪ್ರಶ್ನಿಸಿದ್ದಾರೆ.

ಲೋಕಸಭೆ ಭಾಷಣದಲ್ಲಿ ಹಿಂಸಾಚಾರ ‘ಪೂರ್ವ ಯೋಜಿತ ಪಿತೂರಿ’ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಗಲಭೆ ಇದ್ದಕ್ಕಿದ್ದಂತೆ ನಡೆದಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೊ ಫೆಬ್ರವರಿ 25ರಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿದೆ. ಆದುದರಿಂದ ಅದು ಪಿತೂರಿ ಆಗುವುದು ಹೇಗೆ ? ಎಂದು ಕೇಂದ್ರ ಗೃಹ ಖಾತೆ ಪತ್ರಿಕಾ ಮಾಹಿತಿ ಬ್ಯೂರೊ ಬಿಡುಗಡೆ ಮಾಡಿದ ಹೇಳಿಕೆ ಉಲ್ಲೇಖಿಸಿ ಕಪಿಲ್ ಸಿಬಲ್ ಪ್ರಶ್ನಿಸಿದರು. ಗಲಭೆಕೋರರ ಮುಖಗಳು ಹಲವು ವೀಡಿಯೊಗಳಲ್ಲಿ ಕಂಡು ಬಂದಿದೆ. ನೀವು ಗಲಭೆಕೋರರನ್ನು ಬಂಧಿಸಲು ‘ಮುಖ ಗುರುತು ತಂತ್ರಜ್ಞಾನ’ವನ್ನು ಬಳಸುವ ಬಗ್ಗೆ ಮಾತನಾಡುತ್ತಿದ್ದೀರಿ. ಮೋಹನ್ ನರ್ಸಿಂಗ್ ಹೋಮ್‌ನ ಟೆರೇಸ್‌ನಲ್ಲಿ ನಿಂತು ಬಂದೂಕು ಬಳಸಿ ಗುಂಡು ಹಾರಿಸಿದವರು ಸೇರಿದಂತೆ ಹಲವರು ವೀಡಿಯೊಗಳಲ್ಲಿ ಸೆರೆಯಾಗಿದ್ದಾರೆ. ಅವರ ವಿರುದ್ಧ ನೀವು ಏನಾದರೂ ಕ್ರಮ ಕೈಗೊಂಡಿದ್ದೀರಾ? ಎಂದು ಅವರು ಪ್ರಶ್ನಿಸಿದರು. ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ಯಾಕೆ ದಾಖಲಿಸಿಲ್ಲ ಎಂದು ಅವರು ಪ್ರಶ್ನಿಸಿದರು.

‘‘ನೀವು ಕಾಶ್ಮೀರದ ನಾಯಕರಾದ ಉಮರ್ ಅಬ್ದುಲ್ಲಾ,, ಮೆಹಬೂಬಾ ಮುಫ್ತಿಯನ್ನು ಕಳೆದ ಆರು ತಿಂಗಳಿಂದ ದಿಬ್ಬಂಧನದಲ್ಲಿ ಇರಿಸಿದ್ದೀರಿ. ಅವರ ಹೇಳಿಕೆಗಳು ಗಲಭೆಗೆ ಕಾರಣವಾಗಬಹುದು ಎಂದು ನೀವು ಹೇಳುತ್ತಿದ್ದೀರಿ. ಆದರೆ, ಈಗಾಗಲೇ ದ್ವೇಷ ಭಾಷಣ ಮಾಡಿದ ನಾಯಕರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ ? ಅವರ ವಿರುದ್ಧ ನೀವು ಯಾವಾಗ ಎಫ್‌ಐಆರ್ ದಾಖಲಿಸುತ್ತೀರಿ ?’’ ಎಂದು ಕಪಿಲ್ ಸಿಬಲ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News