×
Ad

ಸಾಗರದ ಮಹಿಳೆಯಲ್ಲಿ ಕೊರೋನ ಸೋಂಕಿಲ್ಲ: ಉಡುಪಿ ಡಿಎಚ್‌ಒ ಡಾ.ಸೂಡ

Update: 2020-03-13 13:50 IST

ಉಡುಪಿ, ಮಾ.13: ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಶಂಕಿತ ಕೊರೋನ ವೈರಸ್ ಸೋಂಕಿಗಾಗಿ ಪರೀಕ್ಷೆಗೊಳಗಾದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಆನಂದಪುರದ 68 ವರ್ಷ ಪ್ರಾಯದ ಮಹಿಳೆಯಲ್ಲಿ ಸೋಂಕು ಕಂಡುಬಂದಿಲ್ಲ. ಅವರ ಗಂಟಲಿನ ದ್ರವದ ಮಾದರಿ ಪರೀಕ್ಷೆಯಿಂದ ಇದು ಖಚಿತವಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಉಸಿರಾಟದ ತೊಂದರೆ, ಕೆಮ್ಮು ಹಾಗೂ ಜ್ವರಕ್ಕಾಗಿ ಈ ಮಹಿಳೆ ಶಿವಮೊಗ್ಗದ ಆಸ್ಪತ್ರೆಯಿಂದ ಬುಧವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಪ್ರತ್ಯೇಕಿತ ವಾರ್ಡಿಗೆ ದಾಖಲಾಗಿದ್ದರು. ಕೊರೋನ ವೈರಸ್‌ನ ದೃಢೀಕರಣಕ್ಕಾಗಿ ಅವರ ಗಂಟಲಿನ ದ್ರವವನ್ನು ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅದರ ಪರೀಕ್ಷಾ ವರದಿ ನಿನ್ನೆ ರಾತ್ರಿ ಬಂದಿದ್ದು, ವೈರಸ್‌ಗೆ ನೆಗೆಟಿವ್ ಆಗಿದೆ ಎಂದು ಡಾ.ಸೂಡ ಹೇಳಿದ್ದಾರೆ. ಇದೇ ವೇಳೆ ಶಿವಮೊಗ್ಗ ಆಸ್ಪತ್ರೆ ಯಲ್ಲಿ ನಡೆಸಿದ ಕೊರೋನ ಸೋಂಕಿನ ಪರೀಕ್ಷೆ ನೆಗೆಟೀವ್ ಆಗಿ ಬಂದಿದೆ ಎಂದು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಗುರುವಾರ ತಿಳಿಸಿದ್ದರು.

ಈ ಮಹಿಳೆ ಫೆಬ್ರವರಿ ಕೊನೆಯ ವಾರದಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಅಲ್ಲಿ ಜ್ವರ, ಉಸಿರಾಟದ ತೊಂದರೆ ಹಾಗೂ ಕೆಮ್ಮಿಗೆ ಚಿಕಿತ್ಸೆ ಪಡೆದು ಕೊಂಡಿದ್ದರು.

ಗುಣಮುಖರಾದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದ ಅವರು ವಿಮಾನ ನಿಲ್ದಾಣದಲ್ಲಿ ಕೊರೋನ ವೈರಸ್ ಸ್ಕ್ರೀನಿಂಗ್‌ಗೆ ಒಳಗಾಗಿದ್ದರು.
ಬೆಂಗಳೂರಿನಿಂದ ಇವರು ಶಿವಮೊಗ್ಗಕ್ಕೆ ಆಗಮಿಸಿದಾಗ ಮತ್ತೆ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಹಿಳೆಯ ಕುಟುಂಬಿಕರು ಉಸಿರಾಟದ ತೊಂದರೆಗಾಗಿ ಆಕೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದು, ಅದರಂತೆ ಬುಧವಾರ ಅವರನ್ನು ಇಲ್ಲಿನ ಐಸೋಲೇಟೆಡ್ ವಾರ್ಡಿಗೆ ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News