×
Ad

ಉಡುಪಿ: ಶಂಕಿತ ಕೊರೋನ ವೈರಸ್ ಪರೀಕ್ಷೆಗೆ ಶಿರ್ವದ ಯುವಕ ಜಿಲ್ಲಾಸ್ಪತ್ರೆಗೆ ದಾಖಲು

Update: 2020-03-13 18:55 IST

ಉಡುಪಿ, ಮಾ.13: ವಿಶ್ವದಾದ್ಯಂತ ಹಾಹಾಕಾರ ಸೃಷ್ಟಿಸಿರುವ ಕೊರೋನ ವೈರಸ್‌ನ ಹಾವಳಿ ಇದೀಗ ಉಡುಪಿ ಜಿಲ್ಲೆಯಲ್ಲೂ ವ್ಯಾಪಿಸುತ್ತಿರುವ ಭೀತಿಯ ನಡುವೆಯೇ ಇಂದು ಸಂಜೆ ಮತ್ತೊಬ್ಬ ಯುವಕ ಶಂಕಿತ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಶಿರ್ವ ಮೂಲದ 37 ವರ್ಷ ಪ್ರಾಯದ ಈ ಯುವಕ ಜಪಾನಿ ಹಡಗಿನಲ್ಲಿ ನೌಕರಿಯಲ್ಲಿದ್ದು, ಇತ್ತೀಚೆಗೆ ಕೊರೋನ ವೈರಸ್ ಕಾರಣಕ್ಕಾಗಿ ನಿರ್ಬಂಧಿತ ವಾಗಿದ್ದ ಜಪಾನಿ ಹಡಗಿನಲ್ಲಿದ್ದರು. ಆದರೆ ಪರೀಕ್ಷೆಯ ವೇಳೆ ಅವರಲ್ಲಿ ಕೊರೋನ ಸೋಂಕು ಪತ್ತೆಯಾಗದ ಕಾರಣ ಬಿಡುಗಡೆಗೊಂಡು ದುಬೈಗೆ ತೆರಳಿ ಊರಿಗೆ ಮರಳಿದ್ದರು. ಅವರು ಊರಿಗೆ ಯಾವಾಗ ಬಂದಿದ್ದಾರೆ ಎಂಬುದು ಇನ್ನೂ ಖಚಿತಗೊಂಡಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಆದರೆ ಅವರಲ್ಲಿ ಕೊರೋನ ವೈರಸ್‌ನ ಪ್ರಾಥಮಿಕ ಲಕ್ಷಣಗಳಾದ ಕೆಮ್ಮು, ಶೀತ, ಜ್ವರದ ತೊಂದರೆ ಕಾಣಿಸಿಕೊಂಡಿಲ್ಲವಾದರೂ, ಸ್ವಲ್ಪ ಉಸಿರಾಟದ ತೊಂದರೆಯೊಂದಿಗೆ ಭೇದಿ ಹಾಗೂ ಹೊಟ್ಟೆನೋವು ಇರುವ ಕಾರಣ ಇಂದು ಸಂಜೆ ಜಿಲ್ಲಾಸ್ಪತ್ರೆಗೆ ಬಂದು ಇಲ್ಲಿನ ಪ್ರತ್ಯೇಕಿತ ವಾರ್ಡ್‌ಗೆ ದಾಖಲಾಗಿದ್ದಾರೆ. ಅವರ ಗಂಟಲಿನ ದ್ರವ ಹಾಗೂ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News