ಕೊರೋನ ವೈರಸ್ ಎಫೆಕ್ಟ್: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿ ಹಲವು ಕಾರ್ಯಕ್ರಮ ಮುಂದೂಡಿಕೆ
ಉಡುಪಿ, ಮಾ.13: ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹೈಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ನಿಗದಿಯಾಗಿರುವ ಹಲವು ಕಾರ್ಯಕ್ರಮಗಳು ರದ್ದಾಗಿದ್ದು, ಇನ್ನು ಕೆಲವನ್ನು ಮುಂದೂಡಲಾಗಿದೆ.
ನಾಳೆಯಿಂದ ಎರಡು ದಿನಗಳ ಕಾಲ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಚೇತನಾ ಹೈಸ್ಕೂಲ್ ಆವರಣದಲ್ಲಿ ನಡೆಯಬೇಕಿದ್ದ ಲೇಖಕಿ, ಸಾಹಿತಿ ವೈದೇಹಿ ಅಧ್ಯಕ್ಷತೆಯ ಉಡುಪಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
ನಾಳೆ ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಬೇಕಿದ್ದ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆಯ ವಿವಿಧ ಕಾರ್ಯಕ್ರಮಗಳ ‘ಬಾಂಧವ್ಯ-2020’ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಅದೇ ರೀತಿ ಮಾ.15ರ ರವಿವಾರ ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆಯಬೇಕಿದ್ದ ‘ವಿಶ್ವ ಗ್ರಾಹಕ ದಿನಾಚರಣೆ’ ಕಾರ್ಯಕ್ರಮವನ್ನು ಸಹ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.