ಪುರಾತತ್ತ್ವಶಾಸ್ತ್ರಜ್ಞ ಪ್ರೊ.ಅ.ಸುಂದರಗೆ ‘ಗೋವಿಂದ ಪೈ ಪ್ರಶಸ್ತಿ’

Update: 2020-03-13 14:15 GMT

ಉಡುಪಿ, ಮಾ.13: ಈ ವರ್ಷದ ಪ್ರತಿಷ್ಠಿತ ‘ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ’ಗೆ ಹಿರಿಯ ಪುರಾತತ್ತ್ವ ಶಾಸ್ತ್ರಜ್ಞ, ಖ್ಯಾತ ಇತಿಹಾಸಕಾರ ಹಾಗೂ ವಿದ್ವಾಂಸ ಪ್ರೊ.ಅ.ಸುಂರ ಇವರನ್ನು ಆಯ್ಕೆ ಮಾಡಲಾಗಿದೆ.

ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆಯ ಸಮಿತಿಯು ಪ್ರೊ. ಸುಂದರ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಾ.23ರಂದು ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಇತಿಹಾಸಕಾರ ನಿಗೆ ಪ್ರಶಸ್ತಿ ಪ್ರದಾನ ಮಾಡಾಲಾಗುವುದು ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣಿಪಾಲ ಗ್ಲೋಬಲ್‌ನ ಮುಖ್ಯಸ್ಥ ಟಿ.ವಿ.ಮೋಹನದಾಸ ಪೈ ತಮ್ಮ ತಾಯಿ ವಿಮಲಾ ಪೈ ಅವರ ಹೆಸರಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮೂಲತ: ಬ್ರಹ್ಮಾವರ ಸಮೀಪದ ನೀಲಾವರದವರಾದ ಪ್ರೊ.ಅ.ಸುಂದರ ಅವರು ಪುರಾತತ್ತ್ವ ಇಲಾಖೆಯ ಕೆಲಸದ ಅನುಭವ ಹೊಂದಿ, ಬಹುಕಾಲ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಕಾರ್ಯ ನಿರ್ವಹಿಸಿದವರು. ಬಳಿಕ ಕೆಲವು ವರ್ಷ ಬಿಜಾಪುರದ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ, ಮೈಸೂರು ವಿ.ವಿಯ ಝಾಕೀರ್ ಹುಸೇನ್ ಪೀಠದ ಮುಖ್ಯಸ್ಥರಾಗಿ, ಕಾರ್ಯ ನಿರ್ವಹಿಸಿ ಪ್ರಸ್ತು ತ ಶಿವಮೊಗ್ಗೆಯಲ್ಲಿ ವಾಸವಾಗಿದ್ದಾರೆ.

ಪುರಾತತ್ತ್ವ ಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಪ್ರೊ. ಸುಂದರ ಅವರು ಭಾರತದ, ವಿಶೇಷವಾಗಿ ಕರ್ನಾಟಕದ ಹಲವಾರು ಉತ್ಖನನಗಳಲ್ಲಿ( ತೇರದಾಳ, ಸನ್ನತಿ, ವಡಂಗಾವ್, ಮಲಪ್ರಭಾನದಿ ತೀರ ಮುಂ.) ಮಹತ್ವದ ಪಾತ್ರ ವಹಿಸಿದ್ದಾರೆ. ಸಾಂಸ್ಕೃತಿಕ ಪರಂಪರೆ ಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿರುವ ಇವರು, ಕೆಳದಿ ಶಿವಪ್ಪ ನಾಯಕನ ಅರಮನೆಯ ಪುನ: ಸ್ಥಾಪನೆಯನ್ನು ಕಾಳಜಿಯಿಂದ ಕೈಗೊಂಡಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಗಳು ದೊರಕಿವೆ.

ಇತಿಹಾಸದ ಕುರಿತಂತೆ ಹಲವು ಕೃತಿಗಳನ್ನು ರಚಿಸಿರುವ ಇವರ ಪ್ರಸಿದ್ಧ ಕೃತಿ ‘ಅರ್ಲಿ ಚೇಂಬರ್ ಆಫ್ ಸೌತ್ ಇಂಡಿಯಾ’. ಹಲವಾರು ಪ್ರಾಗ್ರೈತಿಹಾಸಿಕ ನೆಲೆಗಳ ಕುರಿತು ಆಳವಾದ ಅಧ್ಯಯನ ಮಾಡಿರುವ ಇವರು ಮುನ್ನೂರಕ್ಕೂ ಅಧಿಕ ಮಹತ್ವದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ವಿಷಯ ಗಳಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸಂಶೋಧನೆಗೆ ಸಿದ್ಧಗೊಳಿಸಿದ್ದಾರೆ. ಈಗ ಪ್ರಾಗ್ರೈತಿಹಾಸಿಕ ಕಾಲದಿಂದ ಇಂದಿನ ವರೆಗೆ ಭಾರತೀಯ ಇತಿಹಾಸ ಸಂಪುಟಗಳ ಪ್ರಕಾಶನದ ಸಂಪಾದಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News