×
Ad

'ದಿಲ್ಲಿ ಪೊಲೀಸರ ಪಕ್ಷಪಾತ ನೀತಿ ಖಂಡಿಸಿ' ದ.ಕ.ಜಿಲ್ಲಾದ್ಯಂತ ಪಿಎಫ್‌ಐ ಪ್ರತಿಭಟನೆ

Update: 2020-03-13 19:56 IST

ಮಂಗಳೂರು, ಮಾ.13: ದಿಲ್ಲಿ ಪೋಲಿಸರ ತಾರತಮ್ಯ ನೀತಿ ಹಾಗು ಪಿಎಫ್‌ಐ ದಿಲ್ಲಿ ನಾಯಕರ ಮತ್ತು ಅಮಾಯಕ ಮುಸ್ಲಿಂ ಯುವಕರ ಬಂಧನವನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಶುಕ್ರವಾರ ಜಿಲ್ಲಾದ್ಯಂತ ಪ್ರತಿಭಟನೆ ನಡೆಯಿತು.

ಹಂಪನಕಟ್ಟೆ: ನಗರದ ಹಂಪನಕಟ್ಟೆ ಸರ್ಕಲ್ ಬಳಿ ಪಿಎಫ್‌ಐ ಮಂಗಳೂರು ನಗರ ಜಿಲ್ಲೆಯ ವತಿಯಿಂದ ಪ್ರತಿಭಟನೆ ನಡೆಯಿತು. ಪಿಎಫ್‌ಐ ಜಿಲ್ಲಾಧ್ಯಕ್ಷ ಅಶ್ರಫ್ ಜೋಕಟ್ಟೆ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಕೋಶಾಧಿಕಾರಿ ರಫೀಕ್ ದಾರಿಮಿ, ಕಾರ್ಪೊರೇಟರ್ ಮುನೀಬ್ ಬೆಂಗರೆ, ಹರ್ಷದ್ ಮಂಗಳೂರು, ಅಬೂಬಕರ್ ಕುಳಾಯಿ, ಉಪನ್ಯಾಸಕ ಮುಬಾರ ಮತ್ತಿತರರು ಪಾಲ್ಗೊಂಡಿದ್ದರು.

ಬಜ್ಪೆ: ಪಿಎಫ್‌ಐ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಬಜ್ಪೆ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ಸಮಿತಿ ಸದಸ್ಯ ಹನೀಫ್ ಕಾಟಿಪಳ್ಳ ದಿಲ್ಲಿ ಗಲಭೆಯ ಸಂತ್ರಸ್ತರಿಗೆ ಕಾನೂನು ನೆರವು ಹಾಗು ಭಯಭೀತರಾಗಿದ್ದ ಜನತೆಗೆ ಧೈರ್ಯ ನೀಡಿದ್ದೇ ಪಿಎಫ್‌ಐ ನಾಯಕರ ಬಂಧನಕ್ಕೆ ಕಾರಣವಾಗಿದೆ. ಗೃಹ ಇಲಾಖೆಯ ವೈಫಲ್ಯವನ್ನು ಮರೆಮಾಚಲು ಇಂತಹ ಕುಕೃತ್ಯ ಮಾಡಲಾಗುತ್ತಿದೆ. ಆದರೆ ಪಿಎಫ್‌ಐ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಬದಲಾಗಿ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದರು.

 ಪಿಎಫ್‌ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮೊಹಿದೀನ್ ಹಳೆಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ಮೂಲ್ಕಿ-ಮೂಡಬಿದಿರೆ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಜಿಲ್ಲಾ ಕಾರ್ಯದರ್ಶಿ ನವಾಝ್ ಕಾವೂರು, ಬಜಪೆ ಗ್ರಾಪಂ ಸದಸ್ಯರಾದ ನಝೀರ್ ಬಜ್ಪೆ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಕಾವೂರು ಉಪಸ್ಥಿತರಿದ್ದರು. ಇಕ್ಬಾಲ್ ಜೋಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News