ಕೊರೋನ ವೈರಸ್ ಹಿನ್ನೆಲೆ: ಜುಮಾ ನಮಾಝ್‌ನಲ್ಲಿ ನಾಝಿಲತ್ ಕುನೂತ್ ಪಠಣ
ಮಂಗಳೂರು, ಮಾ.13: ವಿಶ್ವದಾದ್ಯಂತ ಕೊರೋನ ವೈರಸ್ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಮತ್ತು ಈ ರೋಗದಿಂದ ರಕ್ಷೆ ಹೊಂದುವ ಸಲುವಾಗಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್‌ನಲ್ಲಿ ನಾಝಿಲತ್ ಕುನೂತ್ ಪಠಿಸಲಾಯಿತು.
ಫರಳ್ ನಮಾಝ್‌ಗಳಲ್ಲಿ ವಿಶೇಷ ನಾಝಿಲತ್ ಕುನೂತ್ ಪಠಿಸುವಂತೆ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಕರೆ ನೀಡಿದ್ದರು. ಅದರಂತೆ ನಗರ ಮತ್ತು ಹೊರವಲಯದ ಮಸೀದಿಗಳಲ್ಲಿ ಗುರುವಾರದಿಂದ ದಿನದ ಐದು ಬಾರಿಯ ನಮಾಝ್‌ನಲ್ಲೂ ನಾಝಿಲತ್ ಕುನೂತ್ ಪಠಿಸಲಾಗುತ್ತಿದೆ. ಅದರಲ್ಲೂ ಮಸೀದಿಗಳ ಇಮಾಮರು ಶುಕ್ರವಾರದ ಜುಮಾ ನಮಾಝ್ ಬಳಿಕ ಈ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ಸಾರಿದರು.
‘ಪ್ರವಾದಿಯ ಕಾಲದಲ್ಲೇ ನಾಝಿಲತ್ ಕುನೂತ್ ಪಠಿಸಿದ ಇತಿಹಾಸವಿದೆ. ಯುದ್ಧ ಕಾಲದಲ್ಲಿ ಮತ್ತು ವಿಪತ್ತು ಸಂದರ್ಭದಲ್ಲಿ ಹಾಗೂ ಮಾರಕ ರೋಗಗಳ ಸಂದರ್ಭ ಮಾನವ ಕುಲದ ಉಳಿವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕಿದೆ. ಯಾವುದೇ ವಿಪತ್ತು, ಮಾರಕ ರೋಗಗಳಿಗೆ ಪ್ರದೇಶ, ಗಡಿ, ಭಾಷೆ, ಜಾತಿ, ಧರ್ಮದ ಹಂಗಿಲ್ಲ. ಅದು ಎಲ್ಲವನ್ನೂ ಮೀರಿದ ಪ್ರಕ್ರಿಯೆಯಾಗಿದೆ. ಹಾಗಾಗಿ ಎಲ್ಲರೂ ಅವೆಲ್ಲವನ್ನೂ ಮೀರಿ ಮಾನವೀಯತೆಯ ನೆಲೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರೆ ಖಂಡಿತಾ ಪ್ರತಿಫಲವಿದೆ.
-ಎಸ್‌ಬಿ ಮುಹಮ್ಮದ್ ದಾರಿಮಿ, ಖತೀಬ್, ಮುಲ್ಕಿ ಶಾಫಿ ಕೇಂದ್ರ ಜುಮಾ ಮಸೀದಿ
ಪ್ರಪಂಚದಾದ್ಯಂತ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗಗಳು ದೇವರ ಪರೀಕ್ಷೆಯ ಒಂದು ಭಾಗವಾಗಿದೆ. ಹಾಗಂತ ಇದೊಂದು ಶಿಕ್ಷೆ ಎಂದು ಯಾರೂ ಭಾವಿಸಬಾರದು. ಮನುಷ್ಯರು ಕ್ಷಣಕ್ಷಣಕ್ಕೂ ತಪ್ಪನ್ನು ಪುನರಾವರ್ತನೆ ಮಾಡುತ್ತಿದ್ದಾರೆ. ಆ ತಪ್ಪನ್ನು ಅರಿತುಕೊಂಡು ಸತ್ಯಮಾರ್ಗದಲ್ಲಿ ಮುನ್ನಡೆಯಲು ಇಂತಹ ಪರೀಕ್ಷೆಗಳು ಪ್ರೇರಣೆಯಾಗಬೇಕಿದೆ.
-ಉಸ್ಮಾನ್ ಜೌಹರಿ ನೆಲ್ಯಾಡಿ, ಪ್ರಾಂಶುಪಾಲರು/ಅಧ್ಯಕ್ಷರು
ಮರ್ಕಝ್ ದಾರುರ್ರಹ್ಮಾ ಇಸ್ಲಾಮಿಕ್ ಅಕಾಡಮಿ