ಉತ್ತರಪ್ರದೇಶ ಸರಕಾರಕ್ಕೆ ಛೀಮಾರಿ ಹಾಕಿದ್ದ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಮಾನಹಾನಿಕರ ಪೋಸ್ಟ್: ಎಫ್‌ಐಆರ್ ದಾಖಲು

Update: 2020-03-13 15:43 GMT

ಲಕ್ನೋ,ಮಾ.13: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಕಾರರ ಹೆಸರು ಹಾಗೂ ವಿವರಗಳನ್ನು ಒಳಗೊಂಡ ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿದ್ಧ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಹಾಗೂ ನ್ಯಾಯಮೂರ್ತಿ ರಮೇಶ್ ಸಿನ್ಹಾ ವಿರುದ್ಧ ಕೆಲವು ಅಜ್ಞಾತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿರುವುದರ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಾಗಿದೆ.

ಆರ್‌ಟಿಐ ಕಾರ್ಯಕರ್ತೆ ಡಾ. ನೂತನ್ ಠಾಕೂರ್ ಅವರು ಲಕ್ನೋದ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಲಕ್ನೋದಲ್ಲಿ ಉ.ಪ್ರ. ಪೊಲೀಸರು ಸಿಎಎ ವಿರೋಧಿ ಪ್ರತಿಭಟನಕಾರರ ಛಾಯಾ ಚಿತ್ರ ಹಾಗೂ ವಿವರಗಳನ್ನು ಒಳಗೊಂಡ ನಾಮ ಫಲಕಗಳನ್ನು ಸ್ಥಾಪಿಸಿರುವುದರ ವಿರುದ್ಧ ಮುಖ್ಯ ನ್ಯಾಯಮೂರ್ತಿ ಗೋವಿಂದ ಮಾಥುರ್ ಹಾಗೂ ನ್ಯಾಯಮೂರ್ತಿ ರಮೇಶ್ ಸಿನ್ಹಾ ಅವರನ್ನೊಳಗೊಂಡ ನ್ಯಾಯಪೀಠವು, ಮಾರ್ಚ್ 8ರಂದು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತ್ತು. ಮಾರ್ಚ್ 9ರಂದು ನ್ಯಾಯಪೀಠವು ಆದೇಶವೊಂದನ್ನು ಹೊರಡಿಸಿ, ಇಂತಹ ನಾಮಫಲಕಗಳ ಪ್ರದರ್ಶನವು ವ್ಯಕ್ತಿಗಳ ಖಾಸಗಿತನಕ್ಕೆ ವಿರುದ್ಧವಾಗಿದೆಯೆಂದು ಉತ್ತರಪ್ರದೇಶ ಸರಕಾರಕ್ಕೆ ಛೀಮಾರಿ ಹಾಕಿತ್ತು ಹಾಗೂ ಅವುಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ಆದೇಶಿಸಿತ್ತು.

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಕೆಲವು ಅಜ್ಞಾತ ವ್ಯಕ್ತಿಗಳು ತೇಜೋವಧೆ ಮಾಡುವಂತಹ ಹಾಗೂ ಮಾನಹಾನಿಕರವಾದ ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದಾರೆಂದು ಠಾಕೂರ್ ಆಪಾದಿಸಿದ್ದಾರೆ. ಈ ನ್ಯಾಯಾಧೀಶರುಗಳ ವಿರುದ್ಧ ಟ್ವಿಟರ್‌ನಲ್ಲಿ ಕೆಲವು ಅಗೌರವಯುತವಾದ ಹೇಳಿಕೆಗಳನ್ನು ಪ್ರಸಾರ ಮಾಡಿರುವುದನ್ನು ಆಕೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೆಲವು ಅಜ್ಞಾತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಸಂದೇಶಗಳಲ್ಲಿ ಈ ನ್ಯಾಯಾಧೀಶರುಗಳು ಕಾನೂನು ಹಾಗೂ ಪೌರರನ್ನು ರಕ್ಷಿಸುವ ಬದಲು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಹಾಗೂ ಅವರು ಹೊರಡಿಸಿರುವ ಆದೇಶಗಳು ಲೋಪದೋಷಗಳಿಂದ ಕೂಡಿದೆಯೆಂದು ನಿಂದಿಸಿದ್ದರು. ಆಗಂತುಕರು ಫೇಸ್‌ ಬುಕ್ ಹಾಗೂ ವಾಟ್ಸ್‌ಪ್‌ಗಳಲ್ಲಿ ಈ ಸಂದೇಶಗಳನ್ನು ಫಾರ್ವರ್ಡ್ ಮಾಡಿದ್ದಾರೆಂದು ಡಾ. ನೂತನ್ ಠಾಕೂರ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News