ಮತಾಂತರ ವೈಯಕ್ತಿಕ ಆಯ್ಕೆ: ದಿಲ್ಲಿ ಹೈಕೋರ್ಟ್ ತೀರ್ಪು

Update: 2020-03-13 15:49 GMT

ಹೊಸದಿಲ್ಲಿ,ಮಾ.13: ಮತಾಂತರವನ್ನು ನಿಯಂತ್ರಿಸುವಂತೆ ಸರಕಾರಕ್ಕೆ ಆದೇಶ ನೀಡುವಂತೆ ಕೋರಿ ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಈ ಸಂಬಂಧ ಸರಕಾರಕ್ಕೆ ನೋಟಿಸ್ ಜಾರಿಗಳಿಗೊಳಿಸಲು ನಿರಾಕರಿಸಿರುವ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಹಾಗೂ ನ್ಯಾಯಾಧೀಶ ಹರಿಶಂಕರ್ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿದಾರರಿಗೆ ಅವರ ಅರ್ಜಿಯನ್ನು ಹಿಂತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿತು.

ಯಾವುದೇ ಧರ್ಮವನ್ನು ಆಚರಿಸುವುದು ಆಯಾ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಿದೆ. ನೀವು ಈ ವಿಚಾರದಲ್ಲಿ ಬಾಧಿತ ವ್ಯಕ್ತಿ ಕೂಡಾ ಆಗಿರುವುದಿಲ್ಲ ಎಂದು ನ್ಯಾಯಾಲಯ ಅರ್ಜಿದಾರರ ಗಮನಸೆಳೆಯಿತು.

 ಮತಾಂತರ ಗೊಳ್ಳುವುದಕ್ಕೆ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಅನುಮತಿ ಪಡೆದುಕೊಳ್ಳಬೇಕಾಗಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿತು.

“ನೀವು ಏನನ್ನು ನಿಯಂತ್ರಿಸಬೇಕೆಂಬುದು ನಿರೀಕ್ಷಿಸುತ್ತೀರಿ? ನಿಮ್ಮ ಅಹವಾಲು ಏನೆಂಬುದನ್ನು ಅರಿತುಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಿಸಿತು.

ಬಲವಂತ ಹಾಗೂ ಅಮಿಷದಿಂದ ನಡೆಸುವ ಮತಾಂತರಗಳು ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಮನವಿಯಲ್ಲಿ  ವಾದಿಸಿದ್ದರು ಹಾಗೂ ಮತಾಂತರ ನಿಯಂತ್ರಣಕ್ಕಾಗಿ 235ನೇ ಕಾನೂನು ಆಯೋಗದ ವರದಿಯ ಜಾರಿಗೆ ಆಗ್ರಹಿಸಿದ್ದರು. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ದುರ್ಬಲರಾದ ವ್ಯಕ್ತಿಗಳು ಬಲವಂತದ ಮತಾಂತರಕ್ಕೆ ಗುರಿಯಾಗುತ್ತಿದ್ದಾರೆಂದು ಅವರು ದೂರಿದ್ದರು.

 ಮಾಟ ಮಂತ್ರ ಹಾಗೂ ಪವಾಡಗಳನ್ನು ಬಳಸಿಕೊಂಡು ಧಾರ್ಮಿಕ ಮತಾಂತರಗಳನ್ನು ನಡೆಸುತ್ತಿರುವ ನಿದರ್ಶನಗಳೂ ಇರುವುದಾಗಿ ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News