ಕೊರೋನಾ ವೈರಸ್: ದ.ಕ. ಜಿಲ್ಲೆಯಲ್ಲಿ ಬಂದ್ ಭೀತಿ
ಮಂಗಳೂರು, ಮಾ.13: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಭಯಾನಕ ಕೊರೋನ ಸೋಂಕು ಈಗಾಗಲೇ ಸಾವಿರಾರು ಜನರನ್ನು ಬಲಿ ಪಡೆದಿದ್ದು, ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವಕ್ಕೆ ವಿಶ್ವವೇ ಸೋಂಕಿನ ಭೀತಿಯಿಂದ ತತ್ತರಿಸಿದ್ದು, ಮಂಗಳೂರಿನಲ್ಲೂ ಕೂಡ ಇದರ ಭಯ ಆವರಿಸಿದೆ. ಶಿಕ್ಷಣ, ಸಾಮಾಜಿಕ, ವ್ಯಾಪಾರಿ ಕ್ಷೇತ್ರಗಳಲ್ಲಿ ಸೋಂಕಿನ ಕರಿನೆರಳ ಛಾಯೆ ಮೂಡಿಸಿದೆ.
ರಾಜ್ಯದ ಕಲ್ಬುರ್ಗಿಯಲ್ಲಿ ಕೊರೋನ ಸೋಂಕಿಗೆ ಬಲಿಯಾಗುವುದರೊಂದಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರಕಾರವು ಮಾ.14ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಮಾಲ್, ಚಿತ್ರಮಂದಿರ ಸಹಿತ ಶಾಲಾ-ಕಾಲೇಜುಗಳಿಗೆ ಒಂದು ವಾರದವರೆಗೆ ನಿರ್ಬಂಧ ವಿಧಿಸಿದೆ.
ದೇಶದಲ್ಲಿ ಈಗಾಗಲೇ ಆರ್ಥಿಕ ಕುಸಿತದಿಂದ ಜನರು ನಲುಗಿ ಹೋಗಿದ್ದು, ಈ ಬಂದ್‌ನಿಂದಾಗಿ ಮಂಗಳೂರಿನಲ್ಲಿ ಕೂಡ ಆರ್ಥಿಕ ವಲಯವು ಕುಸಿತ ಕಾಣಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ ಆರ್ಥಿಕತೆಗಿಂತಲೂ ಆರೋಗ್ಯಕ್ಕೆ ಪ್ರಾಶಸ್ತ್ಯ ನೀಡಬೇಕು ಎಂಬ ಮಾತು ಸಾರ್ವಜನಿಕರ ವಲಯದಿಂದ ಕೇಳಿ ಬಂದಿದೆ.
ಈಗಾಗಲೆ ಶಾಲಾ ಕಾಲೇಜುಗಳ ರಜೆ ಮತ್ತು ಪರೀಕ್ಷಾ ದಿನಾಂಕಗಳ ಬಗ್ಗೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿವೆ. ಮಂಗಳೂರು ಕೇಂದ್ರ ಮಾರುಕಟ್ಟೆ ಸಹಿತ ನಗರದ 10ಕ್ಕೂ ಅಧಿಕ ಮಾರುಕಟ್ಟೆಗಳು, ಬೀದಿ ಬದಿ ವ್ಯಾಪಾರಸ್ಥರು, ಖಾಸಗಿ ಬಸ್ ಸಂಚಾರ, ಆಟೋ ರಿಕ್ಷಾ ಸಂಚಾರ, ಹೊಟೇಲ್ ಉದ್ಯಮ, ಮಾಲ್‌ಗಳು ಹೀಗೆ ಎಲ್ಲೆಡೆ ಕೊರೋನ ವೈರಸ್‌ನ ಬಂದ್ ಭೀತಿ ಎದುರಿಸುತ್ತಿವೆ. ಹೊಟೇಲ್, ಮಾಲ್, ಅಂಗಡಿ ಮುಂಗಟ್ಟು ತೆರೆಯಬೇಕೋ, ಬಸ್-ಆಟೋ ಸಂಚಾರ ಮಾಡಬೇಕೋ ಎಂದು ಮಾಲಕ-ಕಾರ್ಮಿಕ ವರ್ಗ ಚರ್ಚೆಯಲ್ಲಿ ಮುಳುಗಿದ್ದರೆ, ರಸ್ತೆಗೆ ಇಳಿಯಬೇಕೋ ಅಥವಾ ಮನೆಯಲ್ಲೇ ಇದ್ದುಕೊಂಡು ಆರೋಗ್ಯ ಕಾಪಾಡಬೇಕೋ ಎಂಬ ಗೊಂದಲದಲ್ಲಿ ಜನಸಾಮಾನ್ಯರಿದ್ದಾರೆ.
ಶಾಲಾ-ಕಾಲೇಜುಗಳ ರಜೆ, ಪರೀಕ್ಷೆಯ ವಿವರ
ರಾಜ್ಯ ಸರಕಾರವು ಶಾಲಾ ಕಾಲೇಜುಗಳ ರಜೆ ಮತ್ತು ಪರೀಕ್ಷಾ ದಿನಾಂಕಗಳನ್ನು ಮಾರ್ಪಾಡುಗೊಳಿಸಿ ಶುಕ್ರವಾರ ಮತ್ತೆ ಆದೇಶ ಹೊರಡಿಸಿದೆ. ಅದರಂತೆ 1ರಿಂದ 6ನೇ ತರಗತಿಗೆ ಮಾ.14ರಿಂದ ರಜೆ ಸಾರಲಾಗಿದೆ. ಒಂದು ವೇಳೆ ಪರೀಕ್ಷೆ ನಡೆಸಲು ಬಾಕಿಯಿದ್ದರೆ, ಈವರೆಗೆ ನಡೆದ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಮುಂದಿನ ತರಗತಿಗೆ ಭಡ್ತಿ ನೀಡಲು ಸೂಚಿಸಲಾಗಿದೆ.
7ರಿಂದ 9ನೇ ತರಗತಿಗೆ ಮಾ.23ರೊಳಗೆ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಆ ಬಳಿಕ ರಜೆ ನೀಡಲು ಆದೇಶಿಸಲಾಗಿದೆ. ಅಲ್ಲದೆ 2020-21ನೆ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯಂತೆ ತರಗತಿ ಆರಂಭಿಸಲು ನಿರ್ದೇಶಿಸಿದೆ.
ಎಸೆಸ್ಸೆಲ್ಸಿ ಪರೀಕ್ಷೆಯು ಈಗಾಗಲೇ ನಿಗದಿಯಾಗಿರುವಂತೆ ಮಾ.27ರಿಂದ ನಡೆಯಲಿದ್ದು, ಅದರಲ್ಲಿ ಯಾವುದೇ ಮಾರ್ಪಾಡು ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಥಮ ಪಿಯುಸಿ ಪರೀಕ್ಷೆಯು ಈಗಾಗಲೆ ಮುಗಿದಿದ್ದು, ರಜೆ ಸಾರಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು ಚಾಲ್ತಿಯಲ್ಲಿದ್ದು, ನಿಗದಿತ ದಿನಾಂಕದವರೆಗೆ ನಡೆಯಲಿದೆ. ಪದವಿ, ಪಾಲಿಟೆಕ್ನಿಕ್, ವಿವಿ (ಖಾಸಗಿ ಸಹಿತ)ಗಳಿಗೆ ಮಾ.28ರವರೆಗೆ ರಜೆ ಸಾರಲಾಗಿದೆ. ಒಂದು ವೇಳೆ ಈ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಈಗಾಗಲೆ ನಿಗದಿಯಾಗಿದ್ದರೆ ಅದನ್ನು ಮುಂದೂಡಲು ಸೂಚಿಸಲಾಗಿದೆ.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ರಜೆ ಸಾರಲಾಗಿದ್ದು, ಶಿಕ್ಷಣ ಸಂಸ್ಥೆಗಳ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟನೆ ತಿಳಿಸಿದೆ.
ಅಂಗನವಾಡಿಗಳಿಗೆ ರಜೆ
ಜಿಲ್ಲೆಯ ಎಲ್ಲಾ ಅಂಗನವಾಡಿ, ನರ್ಸರಿ, ಎಲ್‌ಕೆಜಿ, ಯುಕೆಜಿ ಸಂಸ್ಥೆಗಳಿಗೂ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಮದ್ರಸಗಳಿಗೆ ರಜೆ
ರಾಜ್ಯದಲ್ಲಿ ಕೊರೋನ ವೈರಸ್ ವರದಿಯಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರಕಾರವು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ ಕಾರಣ ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕರಿಸಿದ ಎಲ್ಲಾ ಮದ್ರಸಗಳಿಗೆ ಮಾ.14ರಿಂದ ಮುಂದಿನ ಪ್ರಕಟನೆಯವರೆಗೆ ರಜೆ ಸಾರಲಾಗಿದೆ. ಎಪ್ರಿಲ್ 4, 5, 6,ರಂದು ನಿಗದಿಯಾಗಿರುವ ಪಬ್ಲಿಕ್ ಪರೀಕ್ಷೆಗಳು ನಡೆಯಲಿದೆ ಎಂದು ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್‌ನ ಪ್ರಕಟನೆ ತಿಳಿಸಿದೆ.
ಕೊರೋನ ವೈರಸ್ ಹಿನ್ನಲೆಯಲ್ಲಿ ಸರಕಾರದ ನಿರ್ದೇಶನದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ.14ರಿಂದ 1 ವಾರಗಳ ಕಾಲ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್‌ನ ಅಧೀನದ ಎಲ್ಲಾ ಮದ್ರಸಗಳಿಗೆ ರಜೆ ಸಾರಲಾಗಿದೆ. ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೋರ್ಡ್‌ನ ಪ್ರಕಟನೆ ತಿಳಿಸಿದೆ.
ಕಾರ್ಯಕ್ರಮಗಳು ಮುಂದೂಡಿಕೆ
ಕೊರೋನಾ ವೈರಸ್ ಹಿನ್ನಲೆಯಲ್ಲಿ ಮತ್ತು ಅದರ ತಡೆಯುವ ಸಲುವಾಗಿ ಸರಕಾರದ ಆದೇಶದಂತೆ ಒಂದು ವಾರ ಸಭೆ ಸಮಾರಂಭಗಳಿಗೆ ನಿರ್ಬಂಧ ಹೇರಿರುವುದರಿಂದ ಮಂಗಳೂರಿನಲ್ಲಿ ನಿಗದಿಯಾಗಿದ್ದ ಹಲವು ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ರೈತರ ಸಮ್ಮೇಳನ: ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಾ.14ರಂದು ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ರೈತರ, ಸಹಕಾರಿಗಳ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಎಸ್‌ಸಿಡಿಸಿಸಿ ಪ್ರಕಟನೆ ತಿಳಿಸಿದೆ.
ಪ್ರೋತ್ಸಾಹಧನ ವಿತರಣೆ: ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಮಾ.15ರಂದು ನಡೆಯಬೇಕಾಗಿದ್ದ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಸಾನಿಧ್ಯ ಉತ್ಸವ: ಮಂಗಳೂರಿನ ಶಕ್ತಿನಗರದ ಸಾನಿಧ್ಯಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯು ಮಾ.14 ಮತ್ತು 15ರಂದು ನಗರದ ಕದ್ರಿಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಸಾನಿಧ್ಯ ಉತ್ಸವ-2020 ಕಾರ್ಯಕ್ರಮವನ್ನು ಸರಕಾರದ ಆದೇಶದನ್ವಯ ಮುಂದೂಡಲಾಗಿದೆ ಎಂದು ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಆಧಾರ್ ಶಿಬಿರ: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಪುತ್ತೂರು ಅಂಚೆ ವಿಭಾಗದಿಂದ ಮಾ.16ರಿಂದ ಜಿಲ್ಲೆಯ ವಿವಿಧೆಡೆ ಆಯೋಜಿಸಲ್ಪಟ್ಟಿರುವ ಆಧಾರ್ ಶಿಬಿರಗಳು ರದ್ದುಗೊಳಿಸಲಾಗಿದೆ ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಪುತ್ತೂರು ಅಂಚೆ ವಿಭಾಗದ ಪ್ರಕಟನೆ ತಿಳಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ : ಸ್ಮಾರ್ಟ್ ಸಿಟಿ ಹಾಗೂ ಇನ್ನಿತರ ಯೋಜನೆಗಳ ಕಾಮಗಾರಿಗೆ ಮಾ.14ರಂದು ನೀಡಬೇಕಾಗಿದ್ದ ಚಾಲನೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
''ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರಕಾರವು 1 ವಾರದ ಕಾಲ ಶಾಲಾ-ಕಾಲೇಜು, ರೆಸ್ಟೊರೆಂಟ್, ಕ್ಲಬ್, ಮಾಲ್‌ಗಳು, ಬೃಹತ್ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಆದೇಶಿಸಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿ ಯಿಂದ ಸ್ವಾಗತಾರ್ಹ. ವ್ಯಾಪಾರ ವಲಯದಲ್ಲಿ ಸಂಕಷ್ಟ ಎದುರಿಸುವುದು ಖಚಿತವಾದರೂ ಕೂಡಾ ಆರೋಗ್ಯವೇ ಮೊದಲ ಆದ್ಯತೆಯಾಗಿರುವುದನ್ನು ಗಮನಿಸಬೇಕಿದೆ''.
- ಐಸಾಕ್ ವಾಸ್, ಅಧ್ಯಕ್ಷರು,
ಕೆನರಾ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ಮಂಗಳೂರು
''ಕೊರೋನ ಸೋಂಕು ಭೀತಿಯಲ್ಲಿ 1 ವಾರದವರೆಗೆ ಮಾಲ್‌ಗಳನ್ನು ಬಂದ್ ಮಾಡುವುದರಿಂದ ಕೋಟ್ಯಂತರ ರೂ. ನಷ್ಟವಾಗಲಿದೆ. ನಷ್ಟಕ್ಕಿಂತಲೂ ಆರೋಗ್ಯ ಅತಿಮುಖ್ಯವಾಗಿದೆ. ಹಾಗಾಗಿ ಸರಕಾರದ ಆದೇಶ ಪಾಲಿಸುತ್ತೇವೆ. ಮಂಗಳೂರಿನಲ್ಲಿ ಸೋಂಕಿನ ಬಗ್ಗೆ ಭೀತಿಗೊಳ್ಳುವ ಅಗತ್ಯವಿಲ್ಲ. ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಫೋರಮ್ ಮಾಲ್‌ನಲ್ಲಿ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ದಿನಕ್ಕೆ ಎರಡು ಬಾರಿ ಫಾಗಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ''.
ಸುನಿಲ್ ಕೆ.ಎಸ್., ಮಾರ್ಕೆಟಿಂಗ್ ಮ್ಯಾನೇಜರ್
ಫೋರಮ್ ಫಿಝಾ ಮಾಲ್
''ಖಾಸಗಿ ಬಸ್ ಸಂಚಾರ ಜಿಲ್ಲೆಯ ಅದರಲ್ಲೂ ಮಂಗಳೂರಿನ ಜೀವನಾಡಿಯಂತಿದೆ. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡರೆ ಜಿಲ್ಲೆಯೇ ಸ್ತಬ್ಧವಾಗಬಹುದು. ಆದರೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ‘ಬಂದ್’ ಮಾಡುವುದರಿಂದ ಏನು ಪ್ರಯೋಜನವಾಗಲಿದೆ ಅಂತ ನನಗೆ ಅರ್ಥ ಆಗುತ್ತಿಲ್ಲ. ನಾವು ಈವರೆಗೂ ಬಸ್ ಸಂಚಾರ ಸ್ಥಗಿತದ ಬಗ್ಗೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ''.
- ದಿಲ್‌ರಾಜ್ ಆಳ್ವ, ಅಧ್ಯಕ್ಷರು
ದ.ಕ. ಜಿಲ್ಲಾ ಬಸ್ ಮಾಲಕರ ಸಂಘ, ಮಂಗಳೂರು
''ನಾವಿನ್ನೂ ಮಾರುಕಟ್ಟೆ ಬಂದ್ ಮಾಡುವ ಬಗ್ಗೆ ನಿರ್ಧರಿಸಿಲ್ಲ. ಸರಕಾರದ ಆದೇಶ ಮತ್ತು ಜನರ ಸ್ಪಂದನೆ ಗಮನಿಸಿ ನಿರ್ಧಾರ ತೆಗೆದು ಕೊಳ್ಳುತ್ತೇವೆ. ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ಸುಮಾರು 500ಕ್ಕೂ ಅಧಿಕ ಅಂಗಡಿಗಳಿವೆ. ಅಂಗಡಿ ಮಾಲಕರು, ಕೆಲಸಗಾರರು, ಕೂಲಿಕಾರ್ಮಿಕರು, ಗ್ರಾಹಕರು ಅಂತ ಕನಿಷ್ಠ 10 ಸಾವಿರ ಮಂದಿ ದಿನಾ ಓಡಾಡುವ ಸ್ಥಳವಿದು. ಕೊರೋನ ವೈರಸ್ ಹಿನ್ನಲೆಯಲ್ಲಿ ಬಂದ್ ಮಾಡಲೇಬೇಕು ಎಂದು ಕಡ್ಡಾಯಗೊಳಿಸಿದರೆ ಬಂದ್ ಮಾಡುವುದು ಅನಿವಾರ್ಯ. ಹಣ್ಣು ಹಂಪಲು, ತರಕಾರಿ ಕೊಳೆಯಲಿದೆ. ಇದರಿಂದ ದಿನಂಪ್ರತಿ ಲಕ್ಷಾಂತರ ರೂ. ನಷ್ಟವಾಗಲಿದೆ''.
- ಜನಾರ್ದನ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ,
ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘ, ಮಂಗಳೂರು
ಕೊರೋನ ವೈರಸ್ ಹಿನ್ನಲೆಯಲ್ಲಿ ಸರಕಾರ ಮುಂಜಾಗರೂಕತಾ ಕ್ರಮ ಕೈಗೊಳ್ಳಬೇಕಾದುದು ಸಹಜ. ಆದರೆ, ಒಂದು ವಾರ ಬಂದ್ ಮಾಡಬೇಕು ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ. ಈ ಒಂದು ವಾರ ಬಂದ್ ಆದರೆ ಜನರಿಗೆ ಆಗುವ ಕಷ್ಟ, ನಷ್ಟಗಳಿಗೆ ಯಾರು ಹೊಣೆ? ಉದ್ಯಮಿಗಳು, ಶ್ರೀಮಂತರು ಬದುಕಿಯಾರು. ಆದರೆ ದಿನಗೂಲಿ ಕಾರ್ಮಿಕರು ಬದುಕುವುದು ಹೇಗೆ ? ಬಂದ್‌ಗೆ ಆದೇಶಿಸುವ ಬದಲು ಶುಚಿತ್ವದ ಬಗ್ಗೆ ಎಚ್ಚರಿಕೆ ನೀಡಿ ಜಾಗೃತಿ ಮೂಡಿಸಬೇಕಿತ್ತು. ಕಂಕನಾಡಿ ಮಾರುಕಟ್ಟೆಯನ್ನು ಬಂದ್ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಜನರ ಸ್ಪಂದನೆ ಅಥವಾ ಅಧಿಕಾರಿಗಳ ಕ್ರಮ ಅನುಸರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ.
- ಅಲಿ ಹಸನ್, ಅಧ್ಯಕ್ಷರು,
ಕಂಕನಾಡಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ
ಸರಕಾರ ಒಳ್ಳೆಯ ಉದ್ದೇಶದಿಂದ ಬಂದ್ ಮಾಡಲು ಸೂಚಿಸಿರಬಹುದು. ಆದರೆ, ಬೀದಿಬದಿ ವ್ಯಾಪಾರಿಗಳಾದ ನಾವು ಮೊದಲೇ ವ್ಯಾಪಾರವಿಲ್ಲದೆ ಸೋತು ಹೋಗಿದ್ದೇವೆ. ಇನ್ನೊಂದು ವಾರ ಬಂದ್ ಆದರೆ ನಾವೆಲ್ಲಾ ಉಪವಾಸ ಕೂರಬೇಕಾದೀತು. ಇನ್ನು ಜನರೇ ಮಂಗಳೂರಿಗೆ ಬಾರದಿದ್ದರೆ ನಾವು ಬಂದು ಏನು ಮಾಡುವುದು.
- ಮುಸ್ತಫಾ ಬಜಾಲ್, ಅಧ್ಯಕ್ಷರು,
ಬೀದಿಬದಿ ವ್ಯಾಪಾರಸ್ಥರ ಸಂಘ, ಮಂಗಳೂರು