ಕರಾವಳಿ ಪ್ರಾಧಿಕಾರದ ಕಾಮಗಾರಿ ಆರು ತಿಂಗಳೊಳಗೆ ಪೂರ್ಣಗೊಳಿಸಿ: ಮಟ್ಟಾರು
ಉಡುಪಿ, ಮಾ.13: ಕರಾವಳಿಯಲ್ಲಿ ವಿಶೇಷವಾಗಿ ಅಭಿವೃದ್ಧಿಯನ್ನು ಮಾಡ ಬೇಕೆಂಬ ಉದ್ದೇಶದಿಂದ ರಚಿಸಲಾಗಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನೇಕ ಕಾಮಗಾರಿಗಳು ಪ್ರಗತಿಯಿಲ್ಲದೆ ವಿಳಂಬವಾಗಿದ್ದು, ಅನೇಕ ಯೋಜನೆ ಗಳು ನೆನೆಗುದಿಗೆ ಬಿದ್ದಿವೆ. ಆದುದರಿಂದ ಬಾಕಿ ಇರುವ ಈ ಎಲ್ಲ ಕಾಮಗಾರಿ ಗಳನ್ನು 6 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಮತ್ತು ಹೊಸ ಕಾಮಗಾರಿ ಗಳನ್ನು ಆದ್ಯತೆ ಮೇರೆಗೆ ತಕ್ಷಣ ಆರಂಭಿಸಬೇಕು ಎಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.
ಉಡುಪಿಯಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಸರಕಾರದ ನಿರ್ದೇಶನದಂತೆ ವಿನೂತನ ಯೋಜನೆಗಳಾದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ತೇಲುವ ಜೆಟ್ಟಿ, ಬೀಚ್ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಿಲ್ಲೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿನೂತನ ಹಾಗೂ ಸುಸಜ್ಜಿತ ಹಬ್ ಮತ್ತು ರೆಸಾರ್ಟ್, ದ್ವೀಪಸ್ತಂಭಗಳ ಬಳಿ ಲೈಟಿಂಗ್ ಮೂಲಕ ಸಮುದ್ರ ತೀರಕ್ಕೆ ಲೇಸರ್ ಲೈಟ್ ವ್ಯವಸ್ಥೆ, ಸೀ ವಾಕ್, ಸೈಕಲ್ ಟ್ರ್ಯಾಕ್ ನಿರ್ಮಾಣ, ಕುದ್ರುಗಳ ಅಭಿವೃದ್ಧಿ, ರೋಪ್ ವೇ ನಿರ್ಮಾಣ ರ್ಕಾಯವನ್ನು ಕೈಗೊಳ್ಳುವ ಬಗ್ಗೆ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಯೋಜನಾ ವರದಿ ತಯಾರಿಸ ಬೇಕು ಎಂದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಪ್ರಾದೇಶಿಕ ನಿರ್ದೇಶಕ(ಪರಿಸರ) ಪ್ರಸನ್ನ ಮಟಾಗಾರ್, ವಿವಿಧ ಇಲಾಖೆಯ ಅಧಿಕಾರಿಗಳಾದ ದಿನೇಶ್ ಕುಮಾರ್, ಕೆ.ಎಸ್.ಹೆಬ್ಸೂರ್, ಚಂದ್ರಶೇಖರ್ ನಾಯಕ್, ನಿದೀಶ್ ಜೆ., ಪ್ರಾಧಿಕಾರದ ವಲಯಾಧಿಕಾರಿ ಕೆ. ಚಂದ್ರಕಾಂತ್, ಹರಿಹರ ಬಿ.ಹರಿಕಾಂತ್ ಮೊದಲಾದವರು ಉಪಸ್ಥಿತರಿದ್ದರು.