ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಗೆ ಶಿಕ್ಷೆ
ಉಡುಪಿ ಮಾ.13: ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಉಡುಪಿ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಮಾ.12ರಂದು ಆದೇಶ ನೀಡಿದೆ.
ಉಡುಪಿ ದೊಡ್ಡಣಗುಡ್ಡೆಯ ವಹೀದ್ ಯಾನೆ ಅಲ್ಲಾವುದ್ದೀನ್(33) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
ಈತನ ವಿರುದ್ದ ಉಡುಪಿ ನಗರ ಠಾಣೆಯಲ್ಲಿ ಕಲಂ: 323, 324, 504, 506 ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗೆ ನ್ಯಾಯಾಲಯವು ಸಮನ್ಸ್, ವಾರಂಟ್ ಹಾಗೂ ಉದ್ಘೋಷಣಾ ಆದೇಶವನ್ನು ಹೊರಡಿಸಿತ್ತು.
ಆದರೆ ಆರೋಪಿಯು ಹಾಜರಾಗದ್ದರಿಂದ ನ್ಯಾಯಾಲಯವು ಆತನ ವಿರುದ್ಧ ಎಲ್.ಪಿ.ಸಿ.10/10ರಲ್ಲಿ ದಸ್ತಗಿರಿ ವಾರಂಟ್ ಹೊರಡಿಸಿತ್ತು. ಉದ್ದೇಶ ಪೂರ್ವಕವಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು 2010ರ ಅ.5ರಂದು ಉಡುಪಿ ನಗರದ ಸಿ.ಪಿ.ಸಿ ಪ್ಲಾಜ ಕಟ್ಟಡದ ಬಳಿ ಪೊಲೀಸರು ಬಂಧಿಸಿದರು.
ಈ ಬಗ್ಗೆ ಉಡುಪಿ ನಗರ ಠಾಣೆಯ ಹಿಂದಿನ ಉಪ ನಿರೀಕ್ಷಕ ಮಾರುತಿ ಜಿ.ನಾಯಕ್ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎನ್.ಮಂಜುನಾಥ್ ಆರೋಪಿಯ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆರೋಪಿಗೆ 3,500ರೂ. ದಂಡ ರೂಪದಲ್ಲಿ ಶಿಕ್ಷೆ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಉಡುಪಿಯ ಕಾನೂನು ಅಧಿಕಾರಿ ಮಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು