ಲಾಯಿಲ ಸರಕಾರಿ ಶಾಲೆಯಲ್ಲಿ ಅಸ್ಪೃಶ್ಯತೆ ಆರೋಪ : ಶಿಕ್ಷಕಿ ವಿರುದ್ಧ ಪ್ರಕರಣ ದಾಖಲು

Update: 2020-03-13 17:14 GMT

ಬೆಳ್ತಂಗಡಿ, ಮಾ.13: ಲಾಯಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳ ಬಗ್ಗೆ ಜಾತಿ ಅಸ್ಪೃಶ್ಯತೆ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಆರೋಪಿ ಶಿಕ್ಷಕಿಯ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ.

ಈ ಅಮಾನವೀಯ ಆರೋಪ ಫೆ.26ರಂದು ಕೇಳಿಬಂದಿತ್ತು. ಲಾಯಿಲದ ಈ ಸರಕಾರಿ ಶಾಲೆಯ ಸಮೀಪ ಕುಟುಂಬವೊಂದರ ಗೃಹಪ್ರವೇಶ ಕಾರ್ಯಕ್ರಮ ಫೆ.26ರಂದು ನಡೆದಿತ್ತು. ಈ ಕಾರ್ಯಕ್ರಮಕ್ಕೆ ಶಾಲೆಯ ಹಿರಿಯ ಶಿಕ್ಷಕಿ ಉಮಾ ರಾವ್ ದಲಿತ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಶಾಲೆಯಲ್ಲೇ ಬಿಟ್ಟು ಉಳಿದ ಮಕ್ಕಳನ್ನು ಕರೆದುಕೊಂಡು ಹೋಗಿದ್ದರೆನ್ನಲಾಗಿದೆ. ಆ ಮೂಲಕ ಎಳೆಯ ವಯಸ್ಸಿನ ಮಕ್ಕಳ ನಡುವೆ ಜಾತಿ ತಾರತಮ್ಯ ಪ್ರದರ್ಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ವಿಚಾರವನ್ನು ಮಕ್ಕಳು ತಮ್ಮ ತಮ್ಮ ಮನೆಯಲ್ಲಿ ವಿಚಾರ ತಿಳಿಸಿದ್ದರು. ಈ ವಿಚಾರವಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪೋಷಕರು ದೂರು ನೀಡಿದ್ದರೂ ಅವರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇದೀಗ ನೊಂದ ಮಕ್ಕಳ ಪೋಷಕರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸಿದ್ದು ಆರೋಪಿ ಶಿಕ್ಷಕಿ ಉಮಾ ರಾವ್ ವಿರುದ್ಧ ದಲಿತ ನಿಂದನೆ ಹಾಗೂ ಸಾರ್ವಜನಿಕ ಅಶಾಂತಿಗೆ ಕಾರಣವಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News