ಜಮಾಅತ್ ಇಸ್ಲಾಮೀ ಹಿಂದ್ ನಿಂದ ದಿಲ್ಲಿ ಗಲಭೆ ಸಂತ್ರಸ್ತರಿಗೆ 10 ಕೋಟಿ ರೂ. ಮೌಲ್ಯದ ಯೋಜನೆ: ಟಿ.ಆರಿಫಲಿ
ಹೊಸದಿಲ್ಲಿ : ದಿಲ್ಲಿ ಕೋಮು ದಾಳಿಯಲ್ಲಿ ಸಿಲುಕಿ ಸಂತ್ರಸ್ತರಾದವರ ಪುನರ್ವಸತಿಗೆ ದೇಶದ ವಿವಿಧ ಸ್ವಯಂಸೇವಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಯೋಗದಲ್ಲಿ 10 ಕೋಟಿ ರೂ. ಮೌಲ್ಯದ ಬೃಹತ್ ಯೋಜನೆಗೆ ಜಮಾಅತೆ ಇಸ್ಲಾಮೀ ಹಿಂದ್ ರೂಪು ನೀಡಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ. ಆರಿಫಲಿ ತಿಳಿಸಿದ್ದಾರೆ.
ಮನೆಗಳನ್ನು ಮರುನಿರ್ಮಿಸುವ ಯೋಜನೆಯಲ್ಲಿ ವಕ್ಫ್ ಬೋರ್ಡ್ ಮತ್ತು ದಿಲ್ಲಿ ಸರಕಾರದ ಸಹಾಯವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.
20 ಕುಟುಂಬಗಳಿಗೆ ಕಮರ್ಶಿಯಲ್ ವಾಹನಗಳು, ಹತ್ತು ಕುಟುಂಬಗಳಿಗೆ ಸಣ್ಣ ಸರಕು ಬಂಡಿಗಳು, ಐದು ಕುಟುಂಬಗಳಿಗೆ ಮಧ್ಯಮ ಸರಕು ವಾಹನಗಳನ್ನು ಕೊಡಲಾಗುವುದು. 50 ವಿಧವೆಯರಿಗೆ ಭತ್ಯೆ, 100 ಅನಾಥರಿಗೆ ಸ್ಕಾಲರ್ ಶಿಪ್ , 500 ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸಲಾಗಿದೆ. 60 ಗಾಯಾಗಳ ಚಿಕಿತ್ಸೆಯನ್ನು ವಹಿಸಿಕೊಳ್ಳಲಾಗಿದೆ ಮತ್ತು ಹತ್ತು ಮಂದಿಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಹೇಳಿದರು.
ಸಂತ್ರಸ್ತರಿಗೆ ಸರಕಾರಿ ಯೋಜನೆ ಸಿಗುವಂತೆ ಮಾಡಲು ಬೇಕಾದ ಕಾನೂನಾತ್ಮಕ ಸಹಾಯವನ್ನು ಮಿಷನ್ 2026ರ ಅಧೀನದಲ್ಲಿ ಅಸೊಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ನೀಡುತ್ತಿದೆ. ಅಲ್ ಶಿಫ ಮಲ್ಟಿ ಸ್ಪೇಶಲಿಟಿ ಆಸ್ಪತ್ರೆಯಲ್ಲಿ ಪ್ರತಿದಿನ 200 ಮಂದಿಗೆ ವಿವಿಧ ಮದ್ದುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ತಜ್ಞ ಚಿಕಿತ್ಸೆ ಬೇಕಾದವರಿಗೆ ಒಖ್ಲಾದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರಿಫಲಿ ತಿಳಿಸಿದರು.